Advertisement

ರೈತರ ಸಮಸ್ಯೆ ಬಗೆಹರಿಸಲು ಸರ್ವ ಕ್ರಮ : ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ.

11:17 PM May 11, 2022 | Team Udayavani |

ಮಂಗಳೂರು: ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ರೈತರಿಗೆ ಭರವಸೆ ನೀಡಿದರು.

Advertisement

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರ ಅಹವಾಲುಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೊಬ್ಬರ ಸಿಗದಿದ್ದರೆ ಕರೆ ಮಾಡಿ
ಮುಂಗಾರು ಹತ್ತಿರವಿದೆ. ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗುವುದು. ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಡಿಐಪಿ, ಯೂರಿಯಾ, ಗೊಬ್ಬರದ ಸಮಸ್ಯೆ ಕಂಡುಬಂದಲ್ಲಿ ರೈತರು ಹಾಗೂ ರೈತ ಸಂಘಟನೆಗಳು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ಪಡೆಯಬಹುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸೀತಾ ಮಾತನಾಡಿ, ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಕೂಡಲೇ ಸಂಪರ್ಕಿಬಹುದಾಗಿದೆ. 1 ಗಂಟೆಯೊಳಗೆ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜದ ಪೂರೈಸಲಾಗುವುದು ಎಂದರು.

ಅದೇ ರೀತಿ ರಸಗೊಬ್ಬರ ದಾಸ್ತಾನು ಮಾಡುವ ಸಂದರ್ಭದಲ್ಲಿ ಚೀಲಕ್ಕೆ ಕೊಕ್ಕೆ ಹಾಕದಂತೆ ಎಚ್ಚರ ವಹಿಸಬೇಕು, 50 ಕೆಜಿ ರಸಗೊಬ್ಬರದ ಚೀಲಕ್ಕೆ ಕಬ್ಬಿಣದ ಕೊಕ್ಕೆ ಹಾಕಿದಲ್ಲಿ ರಂಧ್ರದ ಮೂಲಕ ಗೊಬ್ಬರ ಪೋಲಾಗುವ ಸಾಧ್ಯತೆ ಇದೆ. ಇಂತಹ ವಿಷಯಗಳಲ್ಲಿ ಕೃಷಿ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

Advertisement

ಬೆಳೆ ವಿಮೆ ಸೌಲಭ್ಯ
ಬೆಳೆ ವಿಮ ಹಾಗೂ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಚರ್ಚೆಯಲ್ಲಿ ಬೆಳೆ ವಿಮೆಗೆ ಗೊತ್ತುಪಡಿಸಲಾದ ಬೆಳೆಗಳಿಗೆ ಬ್ಯಾಂಕ್‌ ಖಾತೆಗಳಿರುವ ಬ್ಯಾಂಕುಗಳೇ ಬೆಳೆ ವಿಮೆ ಮಾಡಿಕೊಡುತ್ತವೆ. ಲೋನ್‌ ಪಡೆಯದ ರೈತರು ಕೂಡ ನೋಟಿಫೈಡ್‌ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಹರಿರುತ್ತಾರೆ, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ಮಾಡಾವಿನಲ್ಲಿ ವಿದ್ಯುತ್‌ ಕೇಂದ್ರ
ಸುಳ್ಯದ ಮಾಡಾವಿನಲ್ಲಿ ಮುಂದಿನ ವರ್ಷದೊಳಗೆ 110 ಕೆ.ವಿ. ಕೇಂದ್ರ ನಿರ್ಮಾಣವಾಗಲಿದೆ ಎಂದರು.

ರೈತರ ಮನವಿ
ವಿವಿಧ ರೀತಿಯ ಬೆಳೆ ಇದ್ದರೂ ಬೆಳೆ ಸಮೀಕ್ಷೆ ವೇಳೆ ಕೇವಲ ಒಂದು ಬೆಳೆಯನ್ನು ಮಾತ್ರ ಆರ್‌ಟಿಸಿಯಲ್ಲಿ ನಮೂದಿಸಲಾಗುತ್ತಿದೆ. ಇದು ರೈತರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಕೃಷಿ ಇಲಾಖೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರು ಕೋರಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ರೈತರು ಯಾವುದೇ ಬೆಳೆ ಬೆಳೆದಾಗಲೂ ಆರ್‌ಟಿಸಿಯಲ್ಲಿ ಸೂಕ್ತವಾಗಿ ದಾಖಲಿಸಬೇಕು. ಈ ಸಮಸ್ಯೆಯ ಬಗ್ಗೆ ಕೃಷಿ ಇಲಾಖೆ ಕೂಡಲೇ ಪರಿಹಾರ ಒದಗಿಸಬೇಕು ಎಂದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯಿರಿ
ಜಿಲ್ಲೆಯ ಎಲ್ಲ ರೈತರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿಯವರು, ಗ್ರಾ.ಪಂ. ಮಟ್ಟದಲ್ಲಿ ಈ ಕಾರ್ಡ್‌ ಪಡೆಯಲು ಕಷ್ಟವಾದಲ್ಲಿ ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಒ ನೆರವು ಪಡೆಯುವಂತೆ ತಿಳಿಸಿದರು. ಕೆಲವೊಂದು ಸಮಸ್ಯೆಗಳಿಂದಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯದ ರೈತರ ಪಟ್ಟಿ ನೀಡಿದರೆ ಸರಿಪಡಿಸಿ ಕೊಡಲಾಗುವುದು ಎಂದರು.

ಜಿ.ಪಂ. ಸಿಇಒ ಡಾ| ಕುಮಾರ್‌ ಹಾಗೂ ಎಡಿಸಿ ಡಾ| ಕೃಷ್ಣಮೂರ್ತಿ ವೇದಿಕೆಯ ಲ್ಲಿದ್ದರು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್‌.ಆರ್‌. ನಾಯಕ್‌, ಕೃಷಿ, ಪಶುಸಂಗೋಪನ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ರೈತ ಮುಖಂಡರಾದ ರೂಪೇಶ್‌ ರೈ, ಸಂಪತ್‌, ಆಲ್ವಿನ್‌, ಧನಕೀರ್ತಿ ಬಲಿಪ ಸೇರಿದಂತೆ ರೈತ ಮುಖಂಡರು ಸಭೆಯಲ್ಲಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next