ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಆರು ತಿಂಗಳ ಅಧಿಕಾರಾವಧಿಯಲ್ಲಿ ಎಲ್ಲ ಇಲಾಖೆಗಳ ಕಾರ್ಯ ಸಾಧನೆ ಕಳಪೆಯಾಗಿದ್ದು, ಶೇ.39ರಷ್ಟು ಮಾತ್ರ ಪ್ರಗತಿಯಾಗಿದೆ. ಜತೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿಯೂ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.
ಮೈತ್ರಿ ಸರ್ಕಾರ ರಚನೆಯಾದ ನಂತರ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯ ಮಾಡಿದರೂ ಮುಖ್ಯಮಂತ್ರಿಗಳು ಸ್ಪಂದಿಸದ ಕಾರಣ ತಾವೇ ಸರ್ಕಾರದ ಸಾಧನೆ ಬಗ್ಗೆ ಕಲೆಹಾಕಿದ ಮಾಹಿತಿಯನ್ನು ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ದೋಷವಿದ್ದರೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಲಿ. ಈ ಅಂಕಿಸಂಖ್ಯೆಗಳನ್ನು ಇಲಾಖೆಗಳಿಂದಲೇ ಸಂಗ್ರಹಿಸಲಾಗಿದ್ದು, ಮುಖ್ಯಮಂತ್ರಿಗಳು ಇನ್ನಾದರೂ ರಾಜ್ಯದ ಜನರಿಗೆ ಸತ್ಯ ಹೇಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಒಟ್ಟಾರೆ ಬಜೆಟ್ ಅನುದಾನ 1,87,996 ಕೋಟಿ ರೂ.ಗಳಾಗಿದ್ದು, ಏ.1ರಿಂದ ಅಕ್ಟೋಬರ್‌ವರೆಗೆ 73,440 ಕೋಟಿ ರೂ. ಅನುದಾನವಷ್ಟೇ ಬಳಕೆಯಾಗಿದೆ. ಆ ಮೂಲಕ ಶೇ.39ರಷ್ಟು ಪ್ರಗತಿಯಷ್ಟೇ ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42.40ರಷ್ಟು ಪ್ರಗತಿ ಸಾಧನೆಯಾಗಿತ್ತು. ಇಷ್ಟಾದರೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸತ್ಯಾಂಶ ರಹಸ್ಯವಾಗಿಟ್ಟು, ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಮನ್ನಾ ಯೋಜನೆಯಡಿ ಈವರೆಗೆ 2495 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಸಹಕಾರ ಸಂಘಗಳಿಗೆ ಸರ್ಕಾರ 547 ಕೋಟಿ ರೂ. ಬಡ್ಡಿ ಪಾವತಿಸಬೇಕಿದೆ. ಹಾಲು ಉತ್ಪಾದಕರಿಗೆ 400 ಕೋಟಿ ರೂ. ಪಾವತಿ ಬಾಕಿ ಇದೆ. ಗಂಗಾ ಕಲ್ಯಾಣ ಯೋಜನೆಯಡಿ ಒಂದು ಕೊಳವೆಬಾವಿ ಕೂಡ ಕೊರೆಸಿಲ್ಲ. ಬರಪೀಡಿತ ತಾಲ್ಲೂಕುಗಳಿಗೆ 50 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೇಳುತ್ತಿದ್ದರೂ ಹಣ ಮಾತ್ರ ಖರ್ಚಾಗಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲಿ ಶೇ.29, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೇ.26, ಸಮಾಜ ಕಲ್ಯಾಣ ಇಲಾಖೆ ಶೇ.24, ಲೋಕೋಪಯೋಗಿ ಇಲಾಖೆ ಶೇ.24, ಪರಿಶಿಷ್ಟ ವರ್ಗಗಳ ಇಲಾಖೆ ಶೇ.17 ಹಾಗೂ ಕಂದಾಯ ಇಲಾಖೆಯಲ್ಲಿ ಶೇ.15ರಷ್ಟು ಪ್ರಗತಿಯಷ್ಟೇ ಸಾಧನೆಯಾಗಿರುವುದು ಅಂಕಿಅಂಶಗಳಿಂದ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.