Advertisement

ಸೌಕರ್ಯ ಒದಗಿಸಲು ಎಲ್ಲ ಅಭ್ಯರ್ಥಿಗಳೂ ಸಿದ್ಧ

12:30 PM Apr 30, 2018 | Team Udayavani |

ಬೆಂಗಳೂರು: ಸಂಚಾರ ದಟ್ಟಣೆ ನಿವಾರಣೆ, ಕೆರೆಗಳ ಸಂರಕ್ಷಣೆ, ಮೂಲ ಸೌಕರ್ಯ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ತಾವು ಬದ್ಧರಾಗಿರುವುದಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಣದಲ್ಲಿರುವ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡಿದ್ದಾರೆ.

Advertisement

ಮಿಲಿಯನ್‌ ಓಟರ್‌ ರೈಸಿಂಗ್‌ ಸಂಸ್ಥೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಾರತಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ “ಮಹದೇವಪುರ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಚರ್ಚಾ ವೇದಿಕೆ’ ಕಾರ್ಯಕ್ರಮದಲ್ಲಿ ಎಲ್ಲ ಅಭ್ಯರ್ಥಿಗಳು ಭಾಗವಹಿಸಿ, ಕ್ಷೇತ್ರದ ಪ್ರಮುಖ ಸಮಸ್ಯೆಗಳು, ಪರಿಹಾರಗಳು ಹಾಗೂ ತಾವು ಶಾಸಕರಾಗಿ ಆಯ್ಕೆಯಾದರೆ ಕೈಗೊಳ್ಳುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸ್ವರಾಜ್‌ ಪಕ್ಷದ ಅಭ್ಯರ್ಥಿ ರಮೇಶ್‌ ಚಂದರ್‌ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಮಹತ್ವ ನೀಡಬೇಕಿದ್ದು, ದಟ್ಟಣೆ ನಿವಾರಣೆಗಾಗಿ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಬೇಕಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಹಾಗೂ ಸ್ವರಾಜ್‌ ಕೇಂದ್ರಗಳ ಮೂಲಕ ನಾಗರಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.

ಒತ್ತುವರಿ ತೆರವಾಗಬೇಕು: ಆಮ್‌ ಆದ್ಮಿ ಪಕ್ಷದ ಭಾಸ್ಕರ್‌ ಪ್ರಸಾದ್‌ ಮಾತನಾಡಿ, ತ್ಯಾಜ್ಯ ನಿರ್ವಹಣೆಗೆ ಪ್ರಮುಖ್ಯತೆ ನೀಡಬೇಕಿದ್ದು, ಕ್ಷೇತ್ರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ನಿರ್ದಿಷ್ಟ ಸ್ಥಳಗಳಿಗೆ ಹೋಗುವ ಬಸ್‌ಗಳು ಹಾಗೂ ಪರ್ಯಾಯ ರಸ್ತೆಗಳ ಸಂಖ್ಯೆ ಹೆಚ್ಚಿಸಬೇಕು. ಮೊದಲು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುವ ಅಗತ್ಯವಿದೆ. ತ್ಯಾಜ್ಯ ಸಮಸ್ಯೆ ನಿವಾರಣೆಗೆ ವಾರ್ಡ್‌ ಸಮಿತಿ ರಚಿಸಬೇಕಿದ್ದು, ಸಮಿತಿಯಲ್ಲಿ ಯಾವುದೇ ಪಕ್ಷದ ಪ್ರತಿನಿಧಿಗಳು ಇರಬಾರದು ಎಂದು ಹೇಳಿದರು.

ಮೂಲಸೌಕರ್ಯಕ್ಕೆ ಆದ್ಯತೆ: ಕ್ಷೇತ್ರದಲ್ಲಿ ಸಂಚಾರ ದಟ್ಟಣೆ, ಪರಿಸರ (ಕೆರೆ, ತ್ಯಾಜ್ಯ) ಹಾಗೂ ಮೂಲ ಸೌಕರ್ಯಗಳಿಗೆ ಆದ್ಯತೆ ದೊರೆಯಬೇಕಿದೆ. ಕ್ಷೇತ್ರದಲ್ಲಿ 8 ಲಕ್ಷ ಜನರಿದ್ದು, ನಿತ್ಯ 12-15 ಲಕ್ಷ ಜನರು ಕ್ಷೇತ್ರಕ್ಕೆ ಬಂದು ಹೋಗುತ್ತಾರೆ. ವಾಹನ ದಟ್ಟಣೆ ನಿವಾರಣೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತ್ಯಾಜ್ಯ ಸಂಸ್ಕರಿಸುವ ಮೂಲಕ ಪಾಲಿಕೆಗೆ ಆದಾಯ ಬರುವಂತೆ ಮಾಡಲಾಗುವುದು ಎಂದು ಹಾಲಿ ಶಾಸಕ ಅರವಿಂದ ಲಿಂಬಾವಳಿ ಭರವಸೆ ನೀಡಿದರು. 

Advertisement

ಭ್ರಷ್ಟಾಚಾರ ರಹಿತ ಆಡಳಿತ: ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ಮಾತನಾಡಿ, ಕೆರೆ ಹಾಗೂ ಕಾಲುವೆ ಒತ್ತುವರಿ ತೆರವು, ದಟ್ಟಣೆ ನಿವಾರಣೆ ಆದ್ಯತೆ ನೀಡಬೇಕಿದ್ದು, ಆ ನಿಟ್ಟಿನಲ್ಲಿ ವಾಣಿಜ್ಯ ವಾಹನಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ಸ್ವತ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ 2024ರ ವೇಳೆಗೆ ಮಹದೇವಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುತ್ತೇನೆ ಎಂದು ತಿಳಿಸಿದರು.

ಗ್ರಾಮಗಳಿಗೆ ಸಂಸ್ಥೆಗಳ ಸ್ಥಳಾಂತರ: ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ವೃದ್ಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ ಬಡವರಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಕ್ಷೇತ್ರದ ಜನತೆಯನ್ನು ಅತಿಯಾಗಿ ಕಕಾಡುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಐಟಿ ಮತ್ತು ಬಿಟಿ ಕಂಪನಿಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕಿದೆ. ಇದರೊಂದಿಗೆ ಒತ್ತುವರಿ ತೆರವು ಕೂಡ ಆಗಬೇಕಾಗಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಸತೀಶ್‌ ಹೇಳಿದರು.

ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಮಾಫಿಯಾಗಳಿಗೆ ಸರ್ಕಾರದ ಆರ್ಶೀವಾದವಿದೆ. ಕ್ಷೇತ್ರದಲ್ಲಿ ಹಲವಾರು ಬಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದರೂ ಸ್ಥಳೀಯರ ಮೂಲಕ ಒತ್ತಡ ತಂದಿರುವ ಮಾಫಿಯಾಗಳು ಕಾರ್ಯಾಚರಣೆಗೆ ಅಡ್ಡಿಪಡಿಸಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳು ಹಾಗೂ ನಾಗರಿಕರನ್ನು ಒಳಗೊಂಡ ವಿಶೇಷ ದಳ ರಚಿಸಲಾಗುವುದು.
-ಅರವಿಂದ ಲಿಂಬಾವಳಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next