ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ (90) ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಆ.27ರಂದು ಬೆಳಗ್ಗಿನ ಜಾವ ನಿಧನ ಹೊಂದಿದರು.
ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಅವರು ಮಡಿಯಾಲ ನಾರಾಯಣ ಭಟ್ ಅವರ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದ್ದರು. ತ್ಯಾಗ ಜೀವಿಯಾಗಿದ್ದ ಅವರು 1977ರಿಂದ ಇಲ್ಲಿಯ ತನಕ ಸುಮಾರು 43 ವರ್ಷಗಳ ಕಾಲ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಅಳಿಕೆಗೆ ಎರಡು ಬಾರಿ ಸತ್ಯಸಾಯಿಬಾಬಾ ಆಗಮಿಸಿದ್ದರು.
ಅಳಿಕೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದ ಅವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ವಿದ್ಯಾ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ದೇಶ ವಿದೇಶಗಳಿಂದ ಪ್ರಸಿದ್ಧ ವೈದ್ಯರನ್ನು ಆಹ್ವಾನಿಸಿ, ಸ್ಥಳೀಯರಿಗೆ ಉಚಿತ ವೈದ್ಯಕೀಯ ಶಿಬಿರ ನಡೆಸಿದ್ದು, ಸಾವಿರಾರು ಮಂದಿ ಪ್ರಯೋಜನ ಪಡೆದಿದ್ದರು.
ಸತ್ಯಸಾಯಿ ಬಾಬಾ ಅವರ ಮಾರ್ಗದರ್ಶನದಂತೆ ಅಳಿಕೆಯಲ್ಲಿ ಶ್ರೀ ಸತ್ಯಸಾಯಿ ಜನರಲ್ ಆಸ್ಪತ್ರೆಯನ್ನು ತೆರೆದು ಸ್ಥಳೀಯ ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಲ್ಲಿ ಗಂಗಾಧರ ಭಟ್ ಅವರ ಶ್ರಮ ಅಪಾರವಾಗಿತ್ತು.
ಗುರುವಾರ ಮಧ್ಯಾಹ್ನ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಗಳ ಆವರಣದಲ್ಲಿ ಅವರ ಅಂತಿಮ ಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ.