ಬೆಂಗಳೂರು: ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ನಗರದಲ್ಲಿ ಅಪರಾಧಗಳ ಹಾವಳಿ ಹೆಚ್ಚಾಗಿದ್ದು, ಕೇವಲ ಎರಡೇ ದಿನಗಳಲ್ಲಿ 9 ಗಂಭೀರ ಪ್ರಕರಣ ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಇಡೀ ಏಪ್ರಿಲ್‌ನಲ್ಲಿ ದಾಖಲಾದ ಪ್ರಕರಣಗಳು ಕೇವಲ 8!.
ಹೌದು, ಕಳೆದ 2-3 ದಿನಗಳಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣ, ಪುಂಡರ ಮೇಲೆ ಪೊಲೀಸರು ಗುಂಡು ಹಾರಿಸಿ ಗುಂಡೇಟಿನ ರುಚಿ ತೋರಿಸಿದ್ದು ಸೇರಿ ಸುಮಾರು ಒಂಬತ್ತು ಗಂಭೀರ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್‌ನಲ್ಲಿ ಇದೇ ಮಾದರಿಯ ಒಟ್ಟಾರೆ 8 ಪ್ರಕರಣ ದಾಖಲಾಗಿವೆ. 42 ದಿನ ತುಸು ನಿರಾಳವಾಗಿದ್ದ ಪೊಲೀಸರಿಗೆ ಮತ್ತೆ ತಲೆನೋವು ಶುರುವಾಗಿದೆ.
ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನವೇ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಬುಧವಾರ, ಗುರುವಾರವೂ ಅಪರಾಧ ಪ್ರಕರಣ ನಡೆದಿವೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಹರೀಶ್ ಎಂಬಾತ ಮದ್ಯ ಖರೀದಿಗಾಗಿ ಮನೆಯವರ ಬಳಿ ಹಣ ಕೇಳಿದ್ದು, ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶೇ.80 ದೇಹ ಸುಟ್ಟುಹೋಗಿದೆ.
ಮತ್ತೂಂದು ಪ್ರಕರಣದಲ್ಲಿ ಅತಿಯಾಗಿ ಮದ್ಯ ಸೇವಿಸಿ ದೇವರಾಜ್ ಎಂಬಾತ ಆಯತಪ್ಪಿ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮದ್ಯದ ಅಮಲಿನಲ್ಲಿ ಜಗಳ ತೆಗೆದು ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯ ಶ್ರೀನಿವಾಸ್, ಸಂತೋಷ್ ಇಬ್ಬರು ಬಹಳ ದಿನಗಳ ನಂತರ ಒಟ್ಟಿಗೆ ದೊಮ್ಮಲೂರು ಸ್ಮಶಾನದ ಬಳಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಸಂತೋಷ್ ಶ್ರೀನಿವಾಸ್‌ಗೆ ಹೊಡೆದು ಕೊಲೆ ಮಾಡಿದ್ದಾನೆ.
ಅದೇ ರೀತಿ, ಹೈಗ್ರೌಂಡ್ ಠಾಣೆ ವ್ಯಾಪ್ತಿಯಲ್ಲಿ ಕುಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಇನ್ನು ಬಾಗಲಗುಂಟೆ ಬಳಿ ರೌಡಿಶೀಟರ್‌ಗಳಿಬ್ಬರು ಮದ್ಯದ ನಶೆಯಲ್ಲಿ ನಗರದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ರೌಡಿ ರಣ್‌ಸಿಂಗ್ ಮತ್ತು ಪ್ರಭು ಎಂಬಾತನ ನಡುವೆ ಗಲಾಟೆ ನಡೆದಿದೆ. ಪ್ರಭು ಕರಣ್ ಸಿಂಗ್‌ಗೆ ಚಾಕುವಿನಿದ ಇರಿದು ಕೊಲೆಗೈದಿದ್ದಾನೆ. ಬುಧವಾರ ಪ್ರಭುಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದೇ ವೇಳೆ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಆರೋಪಿ ಸಂಜಯ್ ಎಂಬಾತನಿಗೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ಗುರುವಾರವೂ ನಗರದ 2 ಕಡೆ ಕೊಲೆ ಪ್ರಕರಣ ದಾಖಲಾಗಿದ್ದು, ರಾಮಮೂರ್ತಿನಗರ, ಆರ್.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಶ್ರೀರಾಮಪುರ, ಸುಬ್ರಹ್ಮಣ್ಯಪುರ, ಕೆಂಗೇರಿ, ವಿದ್ಯಾರಣ್ಯಪುರ, ಶೇಷಾದ್ರಿಪುರ ಸೇರಿ ನಗರದ ವಿವಿಧೆಡೆ ಸಣ್ಣ-ಪುಟ್ಟ ಗಲಾಟೆ, ಹಲ್ಲೆ ಪ್ರಕರಣ ದಾಖಲಾಗಿದ್ದು, ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
–ಮೋಹನ್ ಭದ್ರಾವತಿ