ಉಡುಪಿ ಜಿಲ್ಲೆಯ ಕೋಡಿಗ್ರಾಮದ ಕೋಡಿಬೆಂಗ್ರೆ ಪ್ರದೇಶದ ಜನ ಈ ಸಂಕಲ್ಪಕ್ಕೆ ಪಣತೊಟ್ಟಿದ್ದು, 22 ವರ್ಷಗಳಿಂದ ಅನೂಚಾನವಾಗಿ ಮುಂದುವರಿಸಿಕೊಂಡು ಬರುವ ಮೂಲಕ ಮಾದರಿಯಾಗಿದ್ದಾರೆ.
Advertisement
ಮದಿರೆ ಇಲ್ಲದ ದೊಂಪ ಅಪೂರ್ಣಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯ ಹಿಂದಿನ ದಿನದ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ. ಔತಣದ ಜತೆಗೆ ಮದ್ಯದ ಕೌಂಟರ್, ಅಬ್ಬರದ ಡಿಜೆಗೆ ಬೆಳಗ್ಗಿನ ವರೆಗೆ ಯುವಕರ ನೃತ್ಯ ವೈಭವ ಸಾಮಾನ್ಯ. ಈಗೀಗ ಮದುವೆಗಿಂತ ಮೆಹಂದಿಗೇ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಮದುವೆ ಮನೆಯವರಿಗೆ ಮರ್ಯಾ ದೆಯ ಪ್ರಶ್ನೆ, ಸಾಲ ಮಾಡಿಯಾದರೂ ಬಂದವರಿಗೆ ಮದ್ಯ ಹಂಚಬೇಕು. ಇಲ್ಲದಿದ್ದರೆ ಮನೆಯವರನ್ನು “ಏನೂ ಇಲ್ಲವಾ’? ಎಂದೂ ಕೇಳುವವರೂ ಇದ್ದಾರೆ. ಇಲ್ಲದಿದ್ದರೆ ಕುಣಿಯಲು ಕಿಕ್ ಸಿಗುವುದಿಲ್ಲ ಎನ್ನುವವರೂ ಇದ್ದಾರೆ. ಗುಂಡು ಪಾರ್ಟಿ ಇದ್ದರೆ ಮಾತ್ರ ಹೆಚ್ಚು ಮಂದಿ ಬರುತ್ತಾರೆ. ಇಲ್ಲದಿದ್ದರೆ ಮೆಹಂದಿಗೆ ಬರುವವರೇ ಕಡಿಮೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕೋಡಿಬೆಂಗ್ರೆ ಮಾತ್ರ ವಿಭಿನ್ನ.
ಕೋಡಿಬೆಂಗ್ರೆಯು ಪಡುತೋನ್ಸೆ ಗ್ರಾಮಕ್ಕೆ ತಾಗಿಕೊಂಡಿದ್ದರೂ ಕೋಡಿ ಗ್ರಾಮದ ಒಂದು ಸಣ್ಣ ಭಾಗವಾಗಿದೆ. ಸುಮಾರು 300 ಮನೆಗಳಿವೆ ಇಲ್ಲಿವೆ. ಒಂದು ಬದಿ ಸಮುದ್ರ, 2 ಬದಿಗಳಲ್ಲಿ ನದಿಗಳು ಹರಿಯುತ್ತವೆ. ಶೇ. 70ರಷ್ಟು ಮೊಗವೀರರು, ಉಳಿ ದಂತೆ ಬಿಲ್ಲವ, ಖಾರ್ವಿ, ಮುಸ್ಲಿಂ ಸಮುದಾಯದ ಮಂದಿ ಇಲ್ಲಿದ್ದಾರೆ. ಮದ್ಯ, ಮಾದಕ ಪದಾರ್ಥಗಳಿಗೆ ಹೆಚ್ಚಾಗಿ ಬಲಿಯಾಗುತ್ತಿ ರುವುದು ಯುವಕರು. ಯುವಕರ ಮದ್ಯ ಪಾನದ ಚಟ ಆರಂಭದ ಮೊದಲ ವೇದಿಕೆ ಮದುವೆ ಮೆಹಂದಿ ಕಾರ್ಯ ಕ್ರಮ. ಮುಂದೆ ಸಮಾಜದಲ್ಲಿ ಅಸಭ್ಯ ವರ್ತನೆಯ ಜತೆಗೆ ಸಮಾಜ ಘಾತಕ ಕೃತ್ಯಗಳಿಗೂ ಪ್ರೇರಣೆ ಯಾಗುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕಲು ಕೋಡಿಬೆಂಗ್ರೆಯ ಜನರು 22 ವರ್ಷ ಗಳ ಹಿಂದೆ ಈ ಒಂದು ಉತ್ತಮ ಸಂಕಲ್ಪ ಕೈಗೊಂಡರು. ಹಿಂದೂ ಸಮಾಜದವರ ಮದುವೆಯ ಹಿಂದಿನ ದಿನ ಸಾರ್ವಜನಿಕವಾಗಿ ಮದ್ಯ ನೀಡಬಾರದು ಎನ್ನುವುದೇ ಈ ನಿಯಮ. ಆಕ್ಷೇಪವಿಲ್ಲದೆ ಎಲ್ಲರೂ ಈ ಅಭಿಯಾನಕ್ಕೆ ಕೈಜೋಡಿ ಸಿದ್ದಾರೆ. ಅಂಗಡಿಗಳಲ್ಲೂ ತಂಬಾಕು ನಿಷೇಧ
ಈ ಭಾಗದಲ್ಲಿ 10 ಅಂಗಡಿಗಳು, 4 ಹೊಟೇಲುಗಳಿದ್ದು ಅವುಗಳಲ್ಲಿ ಎಲೆ, ಅಡಿಕೆ ಹೊರತು ಪಡಿಸಿ ತಂಬಾಕು ಮಾರಾಟ ಪೂರ್ಣ ನಿಷೇಧಿಸಲಾಗಿದೆ.
Related Articles
ಈ ಹಿಂದೆ ಶಾಲೆಗೆ ಹೋಗುವ ಮಕ್ಕಳು ಪಾನ್‌ಕಿಂಗ್, ಪಾನ್‌ಪರಾಗ್ ದಾಸರಾಗುತ್ತಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಎಲ್ಲ ಅಂಗಡಿಗಳಲ್ಲೂ ಗುಟ್ಕಾ ಮಾರಾಟವನೇ° ನಿಷೇಧಿಸಿದ್ದೇವೆ. ಹೊರಗಿನ ಊರಿನವರು ಬಂದು ಕೇಳಿದರೂ ಇಲ್ಲ ಎನ್ನುತ್ತೇವೆ. 22 ವರ್ಷದಿಂದ ಈ ನಿಯಮ ಇದೆ ಎಂಬುದನ್ನು ಕೇಳಿ ಆಚ್ಚರಿಯ ಜತೆಗೆ ಖುಷಿ ಪಡುತ್ತಾರೆ. ಊರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
-ನಾಗೇಶ್ ತಿಂಗಳಾಯ ಕೋಡಿಬೆಂಗ್ರೆ, ಅಂಗಡಿ ಮಾಲಕ
Advertisement
ಮಹತ್ವದ ನಿರ್ಧಾರಮಕ್ಕಳು ಕುಡಿಯಲು ಆರಂಭಿಸುವುದೇ ಮೆಹಂದಿ ಕಾರ್ಯಕ್ರಮದಲ್ಲಿ. ವಿದ್ಯಾವಂತ ಯುವಕರು ಮದ್ಯದ ದಾಸರಾಗಿ ಭವಿಷ್ಯ ಹಾಳು ಮಾಡಿಕೊಳ್ಳುವುದು ಕಂಡುಬಂದ ಕಾರಣ ಊರವರೆಲ್ಲ ಸೇರಿ ಮಹತ್ವದ ನಿರ್ಧಾರ ಕೈಗೊಂಡೆವು. ಇದೀಗ ಮೆಹಂದಿಗೆ ಸಸ್ಯಾಹಾರಿ ಊಟವಾದರೂ ಅತ್ಯಧಿಕ ಸಂಖ್ಯೆಯಲ್ಲಿ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುತ್ತಾರೆ.
– ನಾಗರಾಜ್ ಬಿ. ಕುಂದರ್, ಅಧ್ಯಕ್ಷರು, ದುರ್ಗಾಪರಮೇಶ್ವರೀ ದೇವಸ್ಥಾನ ಕೋಡಿಬೆಂಗ್ರೆ