Advertisement

ಹೊಂಡಮಯ ಆಲಂಕಾರು-ನಗ್ರಿ ಶರವೂರು ಸಂಪರ್ಕ ರಸ್ತೆ: ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವ ಸ್ಥಳೀಯರು

09:35 PM Dec 29, 2022 | Team Udayavani |

ಆಲಂಕಾರು: ರಸ್ತೆ ಅಭಿವೃದ್ಧಿ ಗ್ರಾಮದ ಅಭಿವೃದ್ಧಿಯ ಕೈಕನ್ನಡಿಯಾಗಿವೆ. ಹೆಚ್ಚಿನ ಗ್ರಾಮೀಣ ಕಚ್ಚಾ ರಸ್ತೆಗಳು ಡಾಮರು ಅಥವಾ ಕಾಂಕ್ರೀಟ್‌ ಆಗಿ ಅಭಿವೃದ್ಧಿಯಾದರೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ಆಲಂಕಾರು-ನಗ್ರಿ ಶರವೂರು ಸಂಪರ್ಕದ ಡಾಮರು ರಸ್ತೆ ಇದೀಗ ಮಣ್ಣಿನ ಲೇಪನದೊಂದಿಗೆ ಅಭಿವೃದ್ಧಿಯ ತದ್ವಿರುದ್ಧವಾಗಿ ಸಾಗುತ್ತಿದೆ. ಈ ರಸ್ತೆಯಲ್ಲಿ ಜನರು ಪ್ರಯಾಣಕ್ಕೆ ಪರದಾಡುತ್ತಿದ್ದು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಸುಮಾರು 20 ವರ್ಷಗಳ ಹಿಂದೆ ಡಾಮರು ಆದ ಈ ರಸ್ತೆ ಬಳಿಕದ ದಿನಗಳಿಂದ ಮರು ಡಾಮರು ಭಾಗ್ಯ ಕಂಡಿಲ್ಲ. ಆಲಂಕಾರು – ಶಾಂತಿಮೊಗರು ಲೋಕೋಪಯೋಗಿ ರಸ್ತೆಯ ಬುಡೇರಿಯಾ ಬಳಿ ಕವಲೊಡೆದು ಸಾಗುವ ಸುಮಾರು 800ಮೀ ರಸ್ತೆಯನ್ನು ಪ್ರತೀ ವರ್ಷ ಸ್ಥಳಿಯಾಡಳಿತ ಮಳೆಗಾಲದ ವೇಳೆ ವಾರ್ಡ್‌ ಅನುದಾನದಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಮಾತ್ರ ಮಾಡುತ್ತಿದ್ದು, ಮಳೆ ಮುಗಿದಾಗ ಮುಚ್ಚಿದ ಗುಂಡಿ ಮತ್ತೆ ಪ್ರತ್ಯಕ್ಷವಾಗುತ್ತಿದೆ.

ಆಟೋಗಳು ಸಂಚಾರಕ್ಕೆ ಹಿಂದೇಟು
ಒಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎರಡು ಅಂಗನವಾಡಿ, ಒಂದು ಅಂಚೆ ಕಚೇರಿ ಸೇರಿದಂತೆ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಈ ರಸ್ತೆ ಸಂಪರ್ಕದ ಕೊಂಡಿಯಾಗಿದೆ. ಈ ಭಾಗಕ್ಕೆ ಬಸ್‌ ಸಂಚಾರ ಇಲ್ಲದಿರುವ ಪರಿಣಾಮ ಜನತೆ ಆಟೋಗಳನ್ನೆ ಅವಲಂಬಿತರಾಗಿದ್ದಾರೆ. ರಸ್ತೆ ತುಂಬಾ ಹೊಂಡಮಯವಾಗಿರುವ ಕಾರಣ ಸಾಮಾನು ಸರಂಜಾಮುಗಳನ್ನು ಸಾಗಿಸುವ ಸಂದರ್ಭ ಆಟೋಗಳ ಬಿಡಿಭಾಗಗಳು ಹಾಳಾಗುತ್ತಿವೆ. ಈ ಪರಿಣಾಮ ಈ ರಸ್ತೆಯಲ್ಲಿ ಆಟೋಗಳು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ರಸ್ತೆ ನಗ್ರಿ, ಪಾಂಜೋಡಿ, ಉಜುರುಳಿ ಸೇರಿದಂತೆ ಕೊçಲ ಗ್ರಾಮದ ಏಣಿತ್ತಡ್ಕ ಪ್ರದೇಶದ ಪರಿಶಿಷ್ಟ ಜಾತಿ ಪಂಗಡದ ಕಾಲನಿಗಳನ್ನು ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ. ಪಾಂಜೋಡಿ, ಉಜುರುಳಿ ಕಾಲನಿ ರಸ್ತೆಗಳು ಕಾಂಕ್ರೀಟ್‌ ಆಗುವ ಮೂಲಕ ಅಭಿವೃದ್ಧಿಯಾಗಿದ್ದು, ಈ ರಸ್ತೆಯ ಆರಂಭದ 800 ಮೀಟರ್‌ ರಸ್ತೆ ಅಭಿವೃದ್ಧಿಯಾಗದೆ ಇರುವುದು ಆದ ಅಭಿವೃದ್ಧಿ ಕಾರ್ಯಗಳು ನಗಣ್ಯವಾಗಿದೆ. ಈ ರಸ್ತೆ ಅಭಿವೃದ್ಧಿಯಾಗದೆ ಇರುವುದು ಈ ಭಾಗದ ಜನತೆ ತಾಳ್ಮೆಯನ್ನು ಪರೀಕ್ಷಿಸುವಂತಿದೆ.

ಶೀಘ್ರ ಮರು ಡಾಮರು
ಮಳೆ ಹಾನಿ ಯೋಜನೆಯಡಿ ಆಲಂಕಾರು – ನಗ್ರಿ ರಸ್ತೆಯ 800ಮೀ ರಸ್ತೆ ಮರು ಡಾಮರೀಕರಣಗೊಳ್ಳಲಿದೆ. ಈಗಾಗಲೇ ಶಾಸಕರು 50 ಲಕ್ಷ ರೂ.ನ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುದಾನ ಬಿಡುಗಡೆಗಾಗಿ ಸರಕಾರಕ್ಕೆ ಕಳುಹಿಸಿದ್ದಾರೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಈ ರಸ್ತೆ ಮರು ಡಾಮರು ಕಾಣಲಿದೆ ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಸದಾನಂದ ಆಚಾರ್ಯ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next