Advertisement

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

01:25 AM Dec 24, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಪದ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೌನ ಮುರಿದಿರುವ ಸಭಾಪತಿ ಬಸವರಾಜ ಹೊರಟ್ಟಿ, “ಇದು ಮುಗಿದ ಅಧ್ಯಾಯ. ಅವಾಚ್ಯ ಪದ ಪ್ರಯೋಗದ ಬಗ್ಗೆ ನಮ್ಮಲ್ಲಿ ಯಾವುದೇ ವೀಡಿಯೋ ದಾಖಲೆಗಳಿಲ್ಲ. ಅಲ್ಲದೆ, ಸದನಕ್ಕೆ ಬಂದು ಪೊಲೀಸರು ಮಹಜರು ಮಾಡಲು ನಾನು ಬಿಟ್ಟಿಲ್ಲ. ಒಂದು ವೇಳೆ ಮಾಡಿದರೆ ಅವರೇ ಜೈಲು ಸೇರಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಸಿ.ಟಿ. ರವಿ ಇಬ್ಬರೂ ನೀಡಿದ ಲಿಖೀತ ದೂರು ಆಧರಿಸಿ ಪರಿಶೀಲನೆ ನಡೆಸಿದ ಬಳಿಕವೇ ನಾನು ತೀರ್ಪು ನೀಡಿದ್ದೆ. ಈ ಪ್ರಕರಣ ಡಿ. 19ಕ್ಕೆ ಮುಕ್ತಾಯಗೊಂಡಿದೆ. ಮತ್ತೆ ತನಿಖೆ ನಡೆಸುವುದಕ್ಕೆ ಯಾವುದೇ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ. ನಾನು ಸದನದ ಕಸ್ಟೋಡಿಯನ್‌ ಆಗಿದ್ದು, ಸದನದಲ್ಲಿ ನಡೆದ ಘಟನೆ ಬಗ್ಗೆ ತೀರ್ಪು ನೀಡಿದ್ದೇನೆ. ಮಹಿಳಾ ಆಯೋಗ ಸಹಿತ ಯಾರ ಪತ್ರಕ್ಕೂ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೀಡಿಯೋ ಕೊಟ್ಟರೆ ಪರಿಶೀಲಿಸುವೆ
ವಿಧಾನ ಪರಿಷತ್ತಿನಲ್ಲಿ ಈ ಹೇಳಿಕೆಗೆ ಸಂಬಂಧಪಟ್ಟಂತೆ ಯಾವುದೇ ವೀಡಿಯೋ ದಾಖಲೆಗಳು ಇಲ್ಲ. ಯಾರಾದರೂ ನಮಗೆ ಲಿಖೀತವಾಗಿ ದೂರು ನೀಡಿ ವೀಡಿಯೋ, ಆಡಿಯೋ ದಾಖಲೆ ಕೊಟ್ಟರೆ ನಾನು ಪರಿಶೀಲನೆ ನಡೆಸುತ್ತೇನೆ. ಈ ಬಗ್ಗೆ ಎಫ್ಎಸ್‌ಎಲ್‌ ವರದಿ ಬೇಕಾಗುತ್ತದೆ. ಯಾವುದೋ ವೀಡಿಯೋ ಇದೆ ಎಂದ ಮಾತ್ರಕ್ಕೆ ನಂಬುವುದಕ್ಕೆ ಆಗುವುದಿಲ್ಲ. ಅದನ್ನು ಆಮೇಲೆ ಯಾರಾದರೂ ನಕಲಿ ಮಾಡಿಕೊಂಡಿದ್ದರೂ ಇರಬಹುದು ಎಂದು ಅಭಿಪ್ರಾಯಪಟ್ಟರು.

ನನ್ನ ಪ್ರಕಾರ ಇದು ಮುಗಿದ ಅಧ್ಯಾಯ. ಕೂಲಂಕಷವಾಗಿ ತನಿಖೆ ಮಾಡಿಯೇ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ತೀರ್ಮಾನದ ಬಳಿಕ ಸದನ ಮುಂದೂಡಿದ್ದೇನೆ. ಈ ಬಗ್ಗೆ ಸಭಾಪತಿಗಳು ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನನ್ನ ಮೇಲೆ ಪ್ರಭಾವ ಬೀರುವುದಕ್ಕೆ ಹರಿಹರ-ಬ್ರಹ್ಮರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ.

ಪೊಲೀಸರು ಮಹಜರು ಮಾಡಿದರೆ ಜೈಲು
ಈ ಘಟನೆಯ ಅನಂತರ ಸಿ.ಟಿ. ರವಿ ಬಂಧನವಾಗಿದೆ. ಇದು ಸರಕಾರ ಹಾಗೂ ಪೊಲಿಸ್‌ ಇಲಾಖೆಯ ವಿಷಯ. ಹೊರಗಡೆ ದಾಖಲಾದ ದೂರಿಗೂ ನಮಗೂ ಸಂಬಂಧವಿಲ್ಲ. ಪರಿಷತ್ತಿನಲ್ಲಿ ನಡೆದ ಘಟನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಉಲ್ಲೇಖಿಸಿ ತಪ್ಪು ಮಾಡಿದ್ದಾರೆ. ನಮ್ಮ ಸದನಕ್ಕೆ ಬಂದು ಮಹಜರು ನಡೆಸುತ್ತೇವೆ ಎಂದು ಕೇಳಿದಾಗ ನಾನು ಸ್ಪಷ್ಟವಾದ ಎಚ್ಚರಿಕೆ ನೀಡಿದ್ದೇನೆ. ಸದನಕ್ಕೆ ಬಂದು ಮಹಜರು ನಡೆಸುವುದಕ್ಕೆ ನಿಮಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿ, ಪರಿಷತ್ತಿನ ಬಾಗಿಲು ಹಾಕಿಸಿದ್ದೇನೆ. ಇಷ್ಟಾದ ಮೇಲೂ ಪೊಲೀಸರು ತನಿಖೆಯ ನೆಪದಲ್ಲಿ ಬಂದರೆ ಅವರೇ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

Advertisement

ಸಿ.ಟಿ. ರವಿ ಬಂಧನ ಲೋಪಕ್ಕೆ ಆಕ್ಷೇಪ
ಸಿ.ಟಿ. ರವಿ ಅವರನ್ನು ಬಂಧಿಸಿ ಕರೆದೊಯ್ಯುವ ವಿಚಾರದಲ್ಲಿ ಪೊಲೀಸರು ದಾರಿ ತಪ್ಪಿದ್ದಾರೆ. “ಅವರಿಗೆ ಏನಾದರೂ ತೊಂದರೆಯಾದರೆ ನಾನು ನಿಮ್ಮನ್ನು ಬಿಡುವುದಿಲ್ಲ’ ಎಂದು ಎಸ್‌ಪಿ ಹಾಗೂ ಪೊಲೀಸ್‌ ಕಮಿಷನರ್‌ಗೆ ಎಚ್ಚರಿಕೆ ನೀಡಿದ್ದೆ. ನಮ್ಮ ಸದನದ ಸದಸ್ಯರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯ. ಪರಿಷತ್‌ ಸದಸ್ಯನನ್ನು ಬಂಧಿಸುವುದಕ್ಕೆ ಮುನ್ನ ಪೊಲೀಸರು ನಮಗೆ ಮಾಹಿತಿ ನೀಡಬೇಕಾಗುತ್ತದೆ ಎನ್ನುವ ಮೂಲಕ ಈ ಪ್ರಕ್ರಿಯೆಯಲ್ಲಿ ಆದ ಲೋಪದ ಬಗ್ಗೆ ಸಭಾಪತಿ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರಿಗೆ ಮಾಹಿತಿ
ವಿಧಾನ ಪರಿಷತ್‌ ಸಭಾಂಗಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಿ.ಟಿ. ರವಿ ನಡುವೆ ನಡೆದ ವಾಗ್ವಾದ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ಸಭಾಪತಿ ಬಸವರಾಜ್‌ ಹೊರಟ್ಟಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ಆಣತಿಯಂತೆ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರವಾಣಿ ಕರೆ ಮಾಡಿದ್ದ ರಾಜಭವನದ ಅಧಿಕಾರಿಗಳು ಪರಿಷತ್ತಿನಲ್ಲಿ ನಡೆದ ಘಟನೆ ಬಗ್ಗೆ ವಿವರ ಕೇಳಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸಭಾಪತಿ ಹೊರಟ್ಟಿ ಮಾಹಿತಿ ನೀಡಿದ್ದಾರೆ.

ರವಿ ಮೇಲೆ ಹಲ್ಲೆಗೆ ಯತ್ನ: 10 ಮಂದಿ ಮೇಲೆ ಎಫ್ಐಆರ್‌
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದ 10 ಜನರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿ.ಟಿ. ರವಿ  ಡಿ. 19ರಂದು ರಾತ್ರಿ 11 ಗಂಟೆ ಸುಮಾರಿಗೆ ನೀಡಿದ್ದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಒಟ್ಟು ಹತ್ತು ಜನ ಅಪರಿಚಿತರು ಎಂದು ದೂರು ದಾಖಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ಹಲ್ಲೆಕೋರರ ವಿರುದ್ಧ ಸಿ.ಟಿ. ರವಿ ದೂರು ನೀಡಿದ್ದರು. ಆದರೆ ಸದ್ಯದ ಎಫ್‌ಐಆರ್‌ನಲ್ಲಿ ಅಪರಿಚಿತ 10 ಜನರ ವಿರುದ್ಧ ಮಾತ್ರ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next