Advertisement

ಆಲಂಕಾರು: ಕುಂತೂರುಪದವು-ಬೀರಂತಡ್ಕ ರಸ್ತೆ ಅವ್ಯವಸ್ಥೆ 

12:42 PM Jul 13, 2018 | Team Udayavani |

ಆಲಂಕಾರು : ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸ. ಯಾವುದೇ ಸಮಾರಂಭಗಳಿಗೆ ಹೋಗುವವರಾದರೆ ಎರಡೆರಡು ಜತೆ ವಸ್ತ್ರಗಳೊಂದಿಗೆ ಪ್ರಯಾಣಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇಲ್ಲವಾದಲ್ಲಿ ಸಂಪೂರ್ಣ ಕೆಸರುಮಯವಾದ ವಸ್ತ್ರದಲ್ಲೇ ಸಭೆ, ಸಮಾರಂಭಗಳಿಗೆ ತೆರಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಉಪ್ಪಿನಂಗಡಿ – ಕಡಬ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿಂದ ಕವಲೊಡೆದ ಬೀರಂತಡ್ಕ ರಸ್ತೆಯಲ್ಲಿ ಸಂಚರಿಸಿದಾಗ ಅನುಭವಿಸಬೇಕಾದ ನರಕ ಯಾತನೆ. 

Advertisement

ಕುಂತೂರು ಪದವಿನ ಮುರ ಚಡಾವು ಎನ್ನುವಲ್ಲಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 2.5 ಕಿ.ಮೀ. ಉದ್ದವಿದೆ. ಕುಂತೂರು ಪದವಿನಿಂದ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡರ ಮನೆ ಹಿಂದುಗಡೆಯಿಂದ ಹಾದು ಹೋಗುವ ಈ ರಸ್ತೆಯು ಕುಂಡಡ್ಕ ಸಂಪರ್ಕಿಸುತ್ತದೆ. ಪೆರಾಬೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ರಸ್ತೆ ತೀರಾ  ದುರಸ್ತಿಯಲ್ಲಿದ್ದು, ಕುಂಡಡ್ಕದಿಂದ ಮುಂದೆ ಕೆಸರುಮಯಗೊಂಡಿದೆ.

ಜಾಗ ಬಿಟ್ಟು ಕೊಡಬೇಕಿದೆ
ಪ್ರಸಿದ್ಧ ಕಾರಣಿಕ ಕ್ಷೇತ್ರ ಐತಿಹ್ಯವುಳ್ಳ ಯಕ್ಷ ಪಾಂಡವರ ಕೆರೆ, ಇಲ್ಲಿನ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀರಾಜನ್‌ ದೈವಸ್ಥಾನಕ್ಕೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಅಭಿವೃದ್ಧಿಗಾಗಿ ಸಂಬಂಧ ಪಟ್ಟವರಿಗೆ ಮನವಿ ಮಾಡಲಾಗಿದೆ. ಆದರೆ ಯಾರೂ ಸ್ಪಂದಿಸಿಲ್ಲ ಎನ್ನುವ ಆರೋಪವೂ ಇದೆ. ಕೆಲವೆಡೆ ರಸ್ತೆ ವಿಸ್ತರಣೆಗೆ ಸ್ಥಳೀಯರು ತಮ್ಮ ಸ್ವಾಧೀನದಲ್ಲಿರುವ ಜಾಗ ಬಿಟ್ಟುಕೊಡುವುದಿಲ್ಲ ಎನ್ನುವ ದೂರು ಕೂಡ ಕೇಳಿಬಂದಿದೆ. ಕೃಷಿಕರೇ ಹೆಚ್ಚಿರುವ ಈ ಭಾಗದಲ್ಲಿ ಕೃಷಿಕರು ಬೆಳೆದ ಕೃಷಿ ಉತ್ಪನ್ನಗಳನ್ನು ಪೇಟೆ, ಪಟ್ಟಣಗಳಿಗೆ ಕೊಂಡೊಯ್ಯಲು ಇದೇ ರಸ್ತೆ ಉಪಯೋಗಿಸುತ್ತಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಲು ಸಹ ಇದೊಂದೇ ರಸ್ತೆ ಇರುವುದು. ದಿನನಿತ್ಯ ಪೇಟೆಗೆ ಉದ್ಯೋಗಕ್ಕೆ ತೆರಳುವ ವಾಹನ ಸವಾರರು ಹೊಂಡ, ಕೆಸರುಮಯ ರಸ್ತೆಯಲ್ಲೇ ಪ್ರಯಾಸ ಪಡುತ್ತಾ ಹೋಗಬೇಕಾಗಿದೆ.

ಸೇತುವೆ ನಿರ್ಮಾಣ: ಸಿಎಂಗೆ ಮನವಿ
ಕಡಬದಿಂದ ಪದವು-ಬೀರಂತಡ್ಕ -ಅಭಿಕಾರ-ದೋಲ್ಪಾಡಿ ಮೂಲಕ ಕಾಣಿಯೂರು, ಪುತ್ತೂರು ಸಂಪರ್ಕ ಕೂಡ ಈ ರಸ್ತೆ ಮೂಲಕ ಸಾಧ್ಯವಿದೆ. ಆದರೆ ಈ ರಸ್ತೆ ಸಂಪರ್ಕಕ್ಕೆ ಬೀರಂತಡ್ಕದಲ್ಲಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣವಾಗಬೇಕಾಗಿದೆ. ಕಾಲಕ್ರಮೇಣ ಇಲ್ಲಿ ಸೇತುವೆ ನಿರ್ಮಾಣಗೊಂಡು ಅಭಿವೃದ್ಧಿಯಾಗಬಹುದೆನ್ನುವ ನಿರೀಕ್ಷೆಯಿಂದ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪಿಡಬ್ಲ್ಯೂಡಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಸೇತುವೆ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣವಾದರೆ ಭಕ್ತರಿಗೆ ಪ್ರಸಿದ್ಧ ದೇವಸ್ಥಾನ, ದೈವಸ್ಥಾನ ಸಂಪರ್ಕಿಸಲು ಅತೀ ಹತ್ತಿರದ ರಸ್ತೆ ಇದಾಗುತ್ತದೆ. ಇದರಿಂದ ಕ್ಷೇತ್ರವೂ ಅಭಿವೃದ್ಧಿ ಹೊಂದಲಿದೆ ಎನ್ನುವುದು ಊರಿನವರ ಅಭಿಪ್ರಾಯವಾಗಿದೆ.

ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಚಿಂತೆ ಇಲ್ಲವೇ?
ಚುನಾವಣಾ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಆದರೆ ಚುನಾವಣೆ ಕಳೆದ ಬಳಿಕ ಭರವಸೆ ಈಡೇರಿಸಲು ಒಂದೊಂದು ಕಾರಣ ನೀಡುತ್ತಿರುವ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಬಗ್ಗೆ ಚಿಂತೆಯೇ ಇಲ್ಲ. ಗ್ರಾಮೀಣ ಭಾಗದ ರಸ್ತೆಗಳ ಆಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿ ತತ್‌ಕ್ಷಣ ಈ ರಸ್ತೆಯನ್ನು ಸುಸಜ್ಜಿತಗೊಳಿಸಬೇಕು.
– ಯಾದವ ಬೀರಂತಡ್ಕ
ಸ್ಥಳೀಯ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next