ಆಳಂದ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳ ಬಳಿಕ ಜೂ.25ರಿಂದ ಜು.4ರವರೆಗೆ ನಡೆಸಲು ಉದ್ದೇಶಿಸಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಾಮಾಜಿಕ ಅಂತರ ಕಾಪಾಡಿ ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ.
ತಾಲೂಕಿನಲ್ಲಿ 18 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು, 96 ಪ್ರೌಢಶಾಲೆಗಳ ಒಟ್ಟು 5011 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಸರ್ಕಾರಿ 48, ಅನುದಾನಿತ 11 ಮತ್ತು ಅನುದಾನ ರಹಿತ 37 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಒಟ್ಟು 5011 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತುದಿಗಾಲಲ್ಲಿ ನಿಂತುಕೊಂಡಿದ್ದಾರೆ.
ಈ ಕುರಿತು ಶಿಕ್ಷಣ ಇಲಾಖೆ ಪಟ್ಟಣದಲ್ಲಿ ಸರ್ಕಾರಿ ಬಾಲಕರ, ಎಂಬಿಎಚ್‌ಸಿ, ಎಲ್‌ಎನ್‌ಜೆಪಿ ಈ ಮೂರು ಪರೀಕ್ಷಾ ಕೇಂದ್ರ ತೆರೆದಿದ್ದು, ಈಗಾಗಲೇ ಕೋವಿಡ್-19 ಸೋಂಕು ಪತ್ತೆಯಾಗಿ ಗ್ರಾಮ ಸೀಲ್‌ಡೌನ್ ಆದರೆ ಇಂಥ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರಗಳ ಬದಲಾವಣೆ ಮಾಡಿದರೆ ಪಟ್ಟಣದಲ್ಲಿ ಎರಡು ಹೆಚ್ಚುವರಿ ಕೇಂದ್ರಗಳನ್ನು ತೆರೆದು ಪರೀಕ್ಷೆ ನಡೆಸಲು ಮುಂಜಾಗ್ರತಾವಾಗಿ ಸಿದ್ಧತೆ ಮಾಡಿಕೊಳ್ಳತೊಡಗಿದೆ.
ಗ್ರಾಮೀಣ ಭಾಗದಲ್ಲಿನ 15 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಈಗಾಗಲೇ ಕೆಲವು ಗ್ರಾಮಗಳಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಒಂದೊಮ್ಮೆ ಗ್ರಾಮವೇ ಸೀಲ್‌ಡೌನ್ ಆದರೆ ಇಂಥ ಹೊತ್ತಿನಲ್ಲಿ ಪರೀಕ್ಷಾ ಕೇಂದ್ರ ಬದಲಾಯಿಸಿ ಪರೀಕ್ಷೆ ನಡೆಸುವುದಕ್ಕಾಗಿ ಯಳಸಂಗಿ, ಭೂಸನೂರ, ಮಾದನಹಿಪ್ಪರಗಾ, ಖಜೂರಿ ಮತ್ತು ವಿ.ಕೆ.ಸಲಗರ ಗ್ರಾಮದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಮರೆಪ್ಪ ಎನ್. ಬಡಿಗೇರ್ ತಿಳಿಸಿದ್ದಾರೆ.
ಪರೀಕ್ಷಾ ನಡೆಸುವ ಜೂ.25ರಂದು ಬೆಳಗಿನ 10.30ಕ್ಕೆ ಸಮಯ ನಿಗದಿಪಡಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಬೆಳಗಿನ 8.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಿರತಕ್ಕದ್ದು, ದೂರದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಸ್ ಮೂಲಕ ಕರೆ ತಂದು ಮರಳಿ ಕಳುಹಿಸಿಕೊಡಲು 9 ಮಾರ್ಗಗಳ ಮೂಲಕ ಕಾರ್ಯಗತ ಕೈಗೊಳ್ಳುವ ಕುರಿತು ಇಲಾಖೆಯ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈಗಾಗಲೇ 18 ಪರೀಕ್ಷಾ ಕೇಂದ್ರಗಳ ಪರಿಸ್ಥಿತಿ ಅವಲೋಕಿಸಿ ಮುಂಜಾಗ್ರತ ಕ್ರಮವಾಗಿ ಔಷಧ ದ್ರವ ಸಿಂಪಡಣೆ ಕಿಟಕಿ, ಬಾಗಿಲು, ನೀರಿನ ವ್ಯವಸ್ಥೆಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸೇರಿ ಸ್ಥಳ ಪರಿಶೀಲನೆ ಕಾರ್ಯ ಕೈಗೊಂಡು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಕುರಿತು ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನಿರಡಗಿ ಅವರ ಅಧ್ಯಕ್ಷತೆಯಲ್ಲಿ ಸಂಬಂಧಿತ ಅಧಿಕಾರಿಗಳು ಸಭೆ ಕೈಗೊಂಡು ಅಂತಿಮ ಸಿದ್ಧತೆ ಕೈಗೊಳ್ಳುವ ಕುರಿತು ಚರ್ಚಿಸಿದರು. ಅಲ್ಲದೆ ಪರೀಕ್ಷೆ ಯಶಸ್ವಿಯಾಗಿ ನಡೆಸಲು ಶಿಕ್ಷಕರು ಸಹಕರಿಸಬೇಕು ಎಂದು ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಈ ಸಭೆಯಲ್ಲಿ ತಾಲೂಕು 10ನೇ ಪರೀಕ್ಷಾ ನೋಡಲ್ ಅಧಿಕಾರಿ ಮರೆಪ್ಪ ಎನ್. ಬಡಿಗೇರ್ ಮಾತನಾಡಿದರು. ಎಂ.ಎನ್. ಪೋದ್ದಾರ, ಶ್ರೀಮಂತ ಜಿಡ್ಡೆ, ವಿನೋದಸ ಮಠ, ರವಿ ಕುಲಕರ್ಣಿ, ಮಡಿವಾಳಪ್ಪ ಮೂಲಿಮನಿ, ಲಕ್ಷ್ಮೀಕಾಂತ ಸಾಸನೇಕರ್ ಮತ್ತಿತರರು ಉಪಸ್ಥಿತರಿದ್ದರು.