Advertisement

ಇದು ಹೆಸರಿಗಷ್ಟೇ ಸರಕಾರಿ ಬಸ್ಸು ನಿಲ್ದಾಣ, ಇಲ್ಲಿ ನಿಲ್ಲುವುದು ಖಾಸಗಿ ವಾಹನಗಳೇ ಹೆಚ್ಚು

04:48 PM Sep 12, 2020 | sudhir |

ಆಲಮೇಲ: ಪಟ್ಟಣದ ಬಸ್‌ ನಿಲ್ದಾಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಬೈಕ್‌ ಸೇರಿದಂತೆ ಖಾಸಗಿ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಪಟ್ಟಿದೆ.

Advertisement

ವಿಜಯಪುರ ಸೇರಿದಂತೆ ಕಲಬುರಗಿ, ಶಾಹಾಪುರ, ಜೇವರ್ಗಿ ಮಾಗದಿಂದ ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಮುಂಬೈಗೆ ತೆರಳುವ ಬಸ್‌ಗಳು ಆಲಮೇಲ ಮಾರ್ಗವಾಗಿ ಸಂಚರಿಸುತ್ತವೆ. ಆದರೆ ನಿಲ್ದಾಣದಲ್ಲಿ ಸರಿಯಾದ ಸೌಕರ್ಯಗಳು ಇಲ್ಲ. ಈ ಬಗ್ಗೆ ಅನೇಕ ಸಂಘಟನೆಗಳು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ಕೆಲ ವರ್ಷಗಳ ಹಿಂದೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಬಸ್‌ ನಿಲ್ದಾಣವನ್ನು ರಿಪೇರಿ ಮಾಡಿ ಹೈಟೆಕ್‌ ಮಾಡಿದರು ಮೂಲ ಸೌಕರ್ಯಗಳೆ ಇಲ್ಲ. ಬಸ್‌ ನಿಲ್ದಾಣದಲ್ಲಿ ಕುಡಿವ ನೀರಿನ ವ್ಯವಸ್ಥೆಯಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಕಳೆದ 6 ತಿಂಗಳ ಹಿಂದೆ ನೂತನ ಶೌಚಾಲಯ ನಿರ್ಮಿಸಲಾಗಿದೆ. ಮಳೆ ಮತ್ತು ಶೌಚಾಲಯದ ನೀರು ಬೇರೆಡೆ ಸ್ಥಳಾಂತರಿಸುವ ವ್ಯವಸ್ಥೆ ಮಾಡದ್ದರಿಂದ ಶೌಚಾಲಯದ ಸುತ್ತಲು ನೀರು ನಿಂತು ಗಬ್ಬು ನಾರುತ್ತಿದೆ. ಪ್ರಯಾಣಿಕರು ಶೌಚಾಲಯಕ್ಕೆ ತೆರಳಲು ಬರದಂತೆ ಹೊಲಸು ನೀರು ಸುತ್ತಲು ನಿಂತು ಕೆರೆಯಂತಾಗಿದೆ.

ಪ್ರಯಾಣಿಕರಿಗೆ ಮಾಹಿತಿ ನೀಡಲು ನಿಲ್ದಾಣದಲ್ಲಿ ಯಾವೊಬ್ಬ ಅಧಿಕಾರಿಯೂ ಇಲ್ಲ. ಅನಕ್ಷರಸ್ತರು, ಅಪರಿಚಿತರು ವಿಚಾರಿಸಲು ಯಾರು ಇಲ್ಲದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಹಳೆ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಕಾಂಪೌಂಡ್‌ ಸುತ್ತ ಪರುಷರು ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದು ಮಹಿಳೆಯರಿಗೆ ಮುಜಗುರ ಉಂಟು ಮಾಡುತ್ತಿದೆ.

ಬಸ್‌ ನಿಲ್ದಾಣ ಬೈಕ್‌ ಸೇರಿದಂತೆ ಖಾಸಗಿ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ನಿರ್ಮಾಣವಾಗಿದೆ. ಇದರಿಂದ ಬಸ್‌ ಗಳು ಪ್ಲಾಟ್‌ ಫಾರ್ಮ್ ಗಳಲ್ಲಿ ನಿಲುಗಡೆಗೆ ಅವಕಾಶವೆ ಇಲ್ಲದಂತಾಗಿದೆ. ಪ್ರಯಾಣಿಕರಿಗೆ ತಿರುಗಾಡಲು ಬರದಂತೆ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಕುಡಕರು ಸೇರಿದಂತೆ ಅನವಶ್ಯಕವಾಗಿ ಕೆಲವರು ಬಸ್‌ ನಿಲ್ದಾಣದಲ್ಲೇ ಠಿಕಾಣಿ ಹೂಡಿದ್ದು ಈ ಬಗ್ಗೆ ಯಾರು ಹೇಳುವರು.

Advertisement

ಬಸ್‌ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ, ತಂಬಾಕು ತಿಂದು ಉಗಿದಿದ್ದು ನೋಡಿದರೆ ಹೇಸಿಗೆ ಆಗುತ್ತೆ. ಹಳ್ಳಿಗಳಿಂದ ಬಂದ ಪ್ರಯಾಣಿಕರಿಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ದುಡ್ಡು ಕೊಟ್ಟು ಬಾಟಲಿ ನೀರು ಖರೀದಿಸಬೇಕಾಗುತ್ತದೆ. ರಾತ್ರಿ ಬಸ್‌ ಸೌಕರ್ಯ ಕಲ್ಪಿಸಬೇಕು.
– ಅಜಯಕುಮಾರ ಬಂಟನೂರ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ

ಬಸ್‌ ನಿಲ್ದಾಣದಲ್ಲಿ ಸ್ವತ್ಛತೆ ಕಾಪಾಡಿ ಮೂಲ ಸೌಕರ್ಯ ಕಲ್ಪಿಸಬೇಕು. ಸಾರಿಗೆ ನಿಯಂತ್ರಣಾಧಿಕಾರಿ ನಿಯೋಜನೆ ಮಾಡಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ.
– ಶಶಿಧರ ಗಣಿಹಾರ ಕರವೇ ತಾಲೂಕಾಧ್ಯಕ್ಷ

– ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next