ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಸೇರಿ ರಾಜ್ಯದ ಹಿಂದೂ ಮುಖಂಡರ ಹತ್ಯೆಗೆ ಸಿದ್ಧತೆ ನಡೆಸಿದ್ದ “ಅಲ್ ಉಮ್ಮಾ’ ಉಗ್ರ ಸಂಘಟನೆಯ ಮೂವರು ಸದಸ್ಯರನ್ನು ತಮಿಳು ನಾಡಿನ ಕ್ಯು ಬ್ರ್ಯಾಂಚ್ ಪೊಲೀಸರು ಬಂಧಿಸಿದ ಬೆನ್ನಲ್ಲೇ, “ಅಲ್ ಹಿಂದ್’ ಎಂಬ ಮತ್ತೂಂದು ಉಗ್ರ ಸಂಘಟನೆ ತನ್ನ ಕಾರ್ಯಚಟುವಟಿಕೆ ಆರಂಭಿಸಲು ಮುಂದಾಗಿದೆ ಎಂಬ ಸ್ಫೋಟಕ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಅಲ್-ಉಮ್ಮಾ ಸಂಘಟನೆ ಸದಸ್ಯರಿಗೆ ನಗರದ ಪೇಯಿಂಗ್ ಗೆಸ್ಟ್(ಪಿಜಿ)ಗಳಲ್ಲಿ ಆಶ್ರಯಕ್ಕೆ ಶಿಫಾರಸು ಮಾಡಿದ್ದ ಆರೋಪದ ಮೇಲೆ ಅಲ್-ಹಿಂದ್ ಸಂಘಟನೆಯ ರಾಜ್ಯ ಮುಖ್ಯಸ್ಥ ಮೆಹಬೂಬ್ ಪಾಷಾ ಸೇರಿ ಕೆಲವರ ವಿರುದ್ಧ ಸಿಸಿಬಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರ ಕಾಯ್ದೆ ಅಡಿಯಲ್ಲಿ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಮ್ಮು-ಕಾಶ್ಮೀರ ಮೂಲದ ಜಾಕೀರ್ ರಶೀದ್ ಭಟ್ ಸ್ಥಾಪಿಸಿರುವ ಅಲ್-ಹಿಂದ್ ಸಂಘಟನೆಯನ್ನು ಅಲ್-ಖೈದಾ ಸಂಘಟನೆ ಮತ್ತೂಂದು ಘಟಕ ಎಂದು ಹೇಳಲಾಗುತ್ತಿದೆ. ಕಳೆದ 2-3 ವರ್ಷಗಳಿಂದ ದೇಶದಲ್ಲಿ ಸಕ್ರಿಯವಾಗಿರುವ ಸಂಘಟನೆ ನಿರಂತರವಾಗಿ ಜಿಹಾದಿ ಕೃತ್ಯವೆಸಗುತ್ತಿದೆ.
ಪ್ರಮುಖವಾಗಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು 370 ವಿಧಿ ಜಾರಿ ಬಳಿಕ ಇನ್ನಷ್ಟು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಸದಸ್ಯರು, ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಸಿದ್ಧತೆ ಕೈಗೊಂಡಿದ್ದಾರೆ. ಅಲ್ಲದೇ ತಮಿಳುನಾಡು ಮತ್ತು ಬೆಂಗಳೂರಿನಲ್ಲಿದ್ದ ಆರೋಪಿಗಳು ವಿದೇಶದಲ್ಲಿರುವ ಉಗ್ರ ಸಂಘಟನೆ ಸದಸ್ಯರ ಜತೆ ಸಂಪರ್ಕ ಹೊಂದಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರ ಮೂಲಗಳು ತಿಳಿಸಿವೆ.
ನಗರದ ಸುದ್ದಗುಂಟೆಪಾಳ್ಯ, ಸೋಲದೇವನ ಹಳ್ಳಿಯ ವಿವಿಧ ಕಡೆಗಳಲ್ಲಿರುವ ಪಿಜಿಗಳನ್ನು ಪರಿ ಚಯಿಸಿಕೊಂಡಿದ್ದ ಮೆಹಬೂಬ್ ಪಾಷಾ, ತಮಿಳು ನಾಡಿನ ಇಂದೂ ಮಕ್ಕಳ್ ಕಚ್ಚಿ ಪಕ್ಷದ ಮುಖಂಡರನ್ನು ಹತ್ಯೆಗೈದು ನಗರಕ್ಕೆ ಬಂದಿದ್ದ ಅಲ್-ಉಮ್ಮಾ ಸಂಘಟನೆ ಮುಖ್ಯಸ್ಥ ಕ್ವಾಜಾ ಮೊಯ್ದಿನ್ ಸೇರಿ 7 ಮಂದಿಗೆ ಪಿಜಿಯಲ್ಲಿ ಆಶ್ರಯಕ್ಕೆ ನೆರವು ನೀಡಿದ್ದ. ಅಲ್ಲದೆ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳ ಸರಬ ರಾಜನ್ನೂ ಈತನೇ ಮಾಡಿದ್ದಾನೆ. ಸದ್ಯ ಆತ ತಲೆಮರೆಸಿ ಕೊಂಡಿದ್ದು ದೆಹಲಿಗೆ ಸಿಸಿಬಿಯ ಒಂದು ತಂಡ ಹೋಗಿದೆ ಎಂದು ಪೊಲೀಸರು ಹೇಳಿದರು.
ಐಸಿಸ್ ಜತೆ ಸಂಪರ್ಕ: ಅಲ್-ಉಮ್ಮಾ ಮತ್ತು ಅಲ್-ಹಿಂದ್ ಸಂಘಟನೆ ಸದಸ್ಯರು ಐಸಿಸ್ ಸಂಘಟನೆ ಜತೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಪೂರಕ ದಾಖಲೆ ದೊರಕಿದ್ದು, ತನಿಖೆ ಮುಂದುವರಿದೆ.
ಎನ್‌ಐಎ ಎಂಟ್ರಿ: ಪ್ರಕರಣದಲ್ಲಿ ಉಗ್ರ ಸಂಘಟನೆಗಳ ಪಾತ್ರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಲಿದೆ.
* ಮೋಹನ್ ಭದ್ರಾವತಿ