ಮೈಸೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಅಕ್ಷಯಪಾತ್ರೆಯ ಕೊಡುಗೆ ಮಹತ್ವವಾದದ್ದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ದಿ ಅಕ್ಷಯಪಾತ್ರ ಪ್ರತಿಷ್ಠಾನದ 300 ಕೋಟಿ ಊಟವನ್ನು ಮಥುರಾದ ವೃಂದಾವನದಲ್ಲಿ ಸೋಮವಾರ, ಮಕ್ಕಳಿಗೆ ಊಟ ಬಡಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಿರುವ ಹಿನ್ನೆಲೆಯಲ್ಲಿ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಅಕ್ಷಯ ಪಾತ್ರ ಪ್ರತಿಷ್ಠಾನದ ಮೈಸೂರು ಶಾಖೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಕ್ಕಳಿಗೆ ಊಟ ಬಡಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ಅಸಮಾನತೆ ವಿಮುಖ: ದೇಶದ 12 ರಾಜ್ಯಗಳಲ್ಲಿ ಅಕ್ಷಯ ಪಾತ್ರೆಯು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 17 ಲಕ್ಷ ಮಕ್ಕಳಿಗೆ ಪೌಷ್ಟಿಕಯುಕ್ತ ಮಧ್ಯಾಹ್ನದ ಬಿಸಿಯೂಟವನ್ನು ವಿತರಿಸುತ್ತಿದೆ. ಎಲ್ಲಾ ಮಕ್ಕಳು ಆರ್ಥಿಕ ಹಾಗೂ ಜಾತಿಯ ಅಸಮಾನತೆಯಿಂದ ವಿಮುಖರಾಗಿ ಒಂದೇ ರೀತಿಯ ಊಟ ಮಾಡುತ್ತಿದ್ದಾರೆ. ಅಕ್ಷಯ ಪಾತ್ರೆಯ ಹಲವಾರು ಅಡುಗೆ ಮನೆಗಳು ಐಎಸ್‌ಒ ಪ್ರಮಾಣಪತ್ರ ಹೊಂದಿದ್ದು, ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದೆ, ಸ್ವಚ್ಛತೆಯನ್ನು ಕಾಪಾಡುತ್ತಿರುವ ಅಕ್ಷಯ ಪಾತ್ರೆಗೆ ಯಶಸ್ಸು ಹಾಗೂ ಮಕ್ಕಳಿಗೆ ಉತ್ತಮ ಜೀವನ ಸಿಗಲಿ ಎಂದು ಹಾರೈಸಿದರು.
ಹಾಜರಾತಿ ವೃದ್ಧಿ: ಶಾರದಾವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಮಾತನಾಡಿ, ನಮ್ಮ ಶಾಲೆಯಲ್ಲಿ ಹಿಂದುಳಿದ ಬಡವರ್ಗದ ಮಕ್ಕಳು ಹೊಟ್ಟೆಗಿಲ್ಲದೆ ಸೊರಗಿದ್ದರು. 2013ನೇ ಸಾಲಿನಲ್ಲಿ ತಮ್ಮ ಶಾಲೆಗೆ ಅಕ್ಷಯ ಪಾತ್ರೆ ಕಾಲಿಟ್ಟ ನಂತರ ಆ ಮಕ್ಕಳು ಆರು ತಿಂಗಳಲ್ಲಿ ದಷ್ಟ-ಪುಷ್ಟರಾದರು. ಶಾಲೆಯ ಹಾಜರಾತಿಯಲ್ಲಿ ಪ್ರಗತಿ ಕಂಡಿತು ಎಂದು ಅಕ್ಷಯ ಪಾತ್ರೆಯ ಕಾರ್ಯವನ್ನು ಶ್ಲಾಘಿಸಿದರು.
ಡ್ರೀಮ್ ಪ್ರಾಜೆಕ್ಟ್: ಇಸ್ಕಾನ್ ಮೈಸೂರಿನ ಉಪಾಧ್ಯಕ್ಷರಾದ ರಸಿಕ ಶೇಖರ ದಾಸ ಮಾತನಾಡಿ, ಅಕ್ಷಯಪಾತ್ರೆಯಲ್ಲಿ ಪ್ರತಿದಿನ ಲಕ್ಷಾಂತರ ಮಕ್ಕಳಿಗೆ ಉಣಬಡಿಸುವ ಬಿಸಿಯೂಟ ತಯಾರಿಕೆ ಹಾಗೂ ವಿತರಿಸುವ ರೀತಿಯನ್ನು ವಿಡಿಯೋ ಮೂಲಕ ಪ್ರಸ್ತುತಪಡಿಸಿದರು. ಅಕ್ಷಯಪಾತ್ರೆಯು ಮಧ್ಯಾಹ್ನದ ಬಿಸಿಯೂಟಕ್ಕಷ್ಟೇ ಸೀಮಿತವಾಗದೆ ಶಾಲಾ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಎಷ್ಟೋ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಡ್ರೀಮ್ ಪ್ರಾಜೆಕ್ಟ್ ಮೂಲಕ ಹೊರತೆಗೆದು ಅವರ ಕನಸನ್ನು ನನಸು ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಹಾಜರಾತಿಯಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ದಿ ಅಕ್ಷಯ ಪ್ರಾತ್ರ ಪ್ರತಿಷ್ಠಾನದವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಬಳಿಕ ಮಥುರೆಯ ವೃಂದಾವನದಲ್ಲಿ ನಡೆದ ಕಾರ್ಯಕ್ರಮವನ್ನು ಎಲ್‌ಇಡಿ ಪರದೆಯ ಮೇಲೆ ಅಂತರ್ಜಾಲದಿಂದ ನೇರಪ್ರಸಾರ ಮಾಡಲಾಯಿತು.