ಹೊಸದಿಲ್ಲಿ: ಪಕ್ಷದ ಮೇಲಿನ ಹಿಡಿತದ ಹೋರಾಟದಲ್ಲಿ ಸ್ವತಃ ತಮ್ಮ ಪುತ್ರ ನೀಡಿರುವ ಹೊಡೆತಕ್ಕೆ ತತ್ತರಿಸಿರುವ ಮುಲಾಯಂ ಸಿಂಗ್ ಯಾದವ್ ಮತ್ತೂಮ್ಮೆ ಥಂಡಾ ಹೊಡೆದಂತೆ ಕಾಣುತ್ತಿದೆ. ಸೋಮವಾರ ಬೆಳಗ್ಗೆ ಪಕ್ಷದ ಚುನಾವಣೆ ಚಿಹ್ನೆಯಾದ ಸೈಕಲ್ ತಮಗೇ ಸೇರಬೇಕು ಎಂದು ಕೋರಿ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದ ಮುಲಾಯಂ ರಾತ್ರಿ, ವೇಳೆ ಅಖೀಲೇಶ್ ಅವರೇ ಮುಂದಿನ ಮುಖ್ಯಮಂತ್ರಿ. ಇದಕ್ಕೆ ನನಗೆ ಯಾವುದೇ ಬೇಸರವೂ ಇಲ್ಲ. ಪಕ್ಷ ವಿಭಜನೆಯ ಸುದ್ದಿಯೂ ಸುಳ್ಳು. ನಾವು ಒಂದಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಘೋಷಿಸಿದ್ದಾರೆ.
ಆದರೆ ಇದಕ್ಕೆ ಅಖೀಲೇಶ್ ಬಣ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದೆ ಎಂಬುದು ಕುತೂಹಲ ಮೂಡಿಸಿದೆ.
ನಾನೇ ಬಾಸ್: ಅಮರ್ ಸಿಂಗ್ ಹಾಗೂ ಶಿವಪಾಲ್ ಯಾದವ್ ಜತೆಗೂಡಿ ಸೋಮವಾರ ಚುನಾವಣಾ ಆಯೋಗ ಭೇಟಿ ಮಾಡಿದ ಮುಲಾಯಂ, ಪುತ್ರ ಅಖೀಲೇಶ್‌ರನ್ನು ಬೆಂಬಲಿಸಿ ಪಕ್ಷದ ನಾಯಕರು ಸಲ್ಲಿಸಿರುವ ಅಫಿಡವಿಟ್‌ಗಳು ತಿರುಚಲ್ಪಟ್ಟಿದ್ದು, ಆ ಬಗ್ಗೆ ಪರಿಶೀಲನೆ ನಡೆಸಬೇಕು. ಸಮಾಜವಾದಿ ಪಕ್ಷಕ್ಕೆ ಈಗಲೂ ತಾವೇ ಅಧ್ಯಕ್ಷ. ಅಖೀಲೇಶ್ ಅವರನ್ನು ರಾಷ್ಟ್ರೀಯ ಮುಖ್ಯಸ್ಥ ಮಾಡಲು ಕರೆಯಲಾಗಿದ್ದ ಸಭೆಯೇ ಅಸಂವಿಧಾನಿಕ. ಹೀಗಾಗಿ ಪಕ್ಷದ ಚುನಾವಣಾ ಚಿಹ್ನೆಯಾಗಿರುವ “ಸೈಕಲ್’ ತಮ್ಮ ಬಣಕ್ಕೇ ಸೇರಬೇಕು. ಜೊತೆಗೆ ಅಖೀಲೇಶ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಭೆಯನ್ನು ಕರೆದಿದ್ದ ರಾಮಗೋಪಾಲ್ ಯಾದವ್ ಅವರನ್ನು ಸಭೆ ಕರೆಯುವ ಮುನ್ನವೇ ಉಚ್ಚಾಟಿಸಲಾಗಿತ್ತು. ಪಕ್ಷದ ಸಂವಿಧಾನದ ಪ್ರಕಾರ ಆ ಸಭೆಯೇ ಅಸಂವಿಧಾನಿಕ ಎಂದು ತಿಳಿಸಿದರು.