ಹೈದರಾಬಾದ್: ಇತ್ತೀಚೆಗೆ ನಡೆದ ವಿಧಾನಸಬೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯ ಸಾಧಿಸಿ ತೆಲಂಗಾಣದಲ್ಲಿ ಸರ್ಕಾರ ರಚನೆ ಮಾಡಿದೆ. ಇದಿಗ ಎಐಎಂಐಎಂ ಶಾಸಕ ಅಕ್ಬರುದ್ದಿನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಆದರೆ ಇದೀಗ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅಕ್ಬರುದ್ದಿನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ ನಿರ್ಧಾರವನ್ನು ವಿರೋಧಿಸಿದ ಬಿಜೆಪಿ ಶಾಸಕರು ಅವರಿಂದ ಪ್ರಮಾಣ ವಚನ ಸ್ವೀಕರಿಸಲೂ ನಿರಾಕರಿಸಿದ್ದಾರೆ.
ಓವೈಸಿ ಅವರಿಂದ ಪಕ್ಷದ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಹೇಳಿದ್ದಾರೆ. ಒವೈಸಿ ನೇತೃತ್ವದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಬಾರದು ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
“ಈ ಹಿಂದೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ (ಅಕ್ಬರುದ್ದಿನ್ ಓವೈಸಿ) ಎದುರು ನಾನು ಪ್ರಮಾಣ ವಚನ ಹೇಗೆ ಸ್ವೀಕರಿಸುವುದು? ಸ್ಪೀಕರ್ ನೇಮಕವಾದ ಬಳಿಕ ನಮ್ಮ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ನಾವು ಎಂದಿಗೂ ಅಂತಹ ಪಕ್ಷದೊಂದಿಗೆ (ಎಐಎಂಐಎಂ) ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ವಿಚಾರದ ಬಗ್ಗೆ ನಾವು ರಾಜ್ಯಪಾಲರ ಬಳಿ ಹೋಗುತ್ತೇವೆ” ಎಂದು ಗೋಶ್ಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಹೇಳಿದರು.
ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿಗೂ ತಮ್ಮ ಹಿಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಂತೆಯೇ ಎಐಎಂಐಎಂ ಭಯವಿದೆ ಎಂದು ಟಿ ರಾಜಾ ಸಿಂಗ್ ಆರೋಪಿಸಿದ್ದಾರೆ.