ರಾಯ್ ಪುರ್: ಚತ್ತೀಸ್ ಗಢದ ಮೊದಲ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಸಿದ್ದ ಹಿರಿಯ ರಾಜಕಾರಣಿ ಅಜಿತ್ ಜೋಗಿ (74ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಶುಕ್ರವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಅಜಿತ್ ಜೋಗಿ ಅವರು ಪತ್ನಿ, ಕೋಟ ಕ್ಷೇತ್ರದ ಶಾಸಕಿ ರೇಣು ಜೋಗಿ ಹಾಗೂ ಪುತ್ರ ಅಮಿತ್ ಜೋಗಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ತಂದೆಯ ಅಗಲಿಕೆ ಸುದ್ದಿಯನ್ನು ಪುತ್ರ ಅಮಿತ್ ಟ್ವೀಟರ್ ನಲ್ಲಿ ಖಚಿತಪಡಿಸಿದ್ದಾರೆ.
ತಿಂಗಳ ಹಿಂದಷ್ಟೇ ಜೋಗಿ ಅವರಿಗೆ ಹೃದಯ ಸ್ತಂಭನವಾಗಿದ್ದು, ಅವರನ್ನು ರಾಯ್ ಪುರದ ಶ್ರೀ ನಾರಾಯಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಯುಸಿರೆಳೆಯುವವರೆಗೂ ಅವರು ಕೋಮಾ ಸ್ಥಿತಿಯಲ್ಲಿಯೇ ಇದ್ದಿರುವುದಾಗಿ ವರದಿ ತಿಳಿಸಿದೆ.
ಅಜಿತ್ ಜೋಗಿ ಅವರು 1946ರ ಏಪ್ರಿಲ್ 29ರಂದು ಬಿಲಾಸ್ ಪುರದಲ್ಲಿ ಜನಿಸಿದ್ದರು. 1986ರಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಹಿಂದುಳಿದ ಜಾತಿ ಮತ್ತು ಹಿಂದುಳಿದ ಪಂಗಡ ಸದಸ್ಯರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 1986ರಿಂದ 1998ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.
1980ರ ದಶಕದಲ್ಲಿ ಜೋಗಿ ಅವರ ರಾಜಕೀಯ ಜೀವನ ಮೇಲಕ್ಕೇರತೊಡಗಿತ್ತು. 1987-89ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. 1998ರಲ್ಲಿ ರಾಯ್ ಗಢ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿದ್ದರು. 2000ನೇ ಇಸವಿಯಲ್ಲಿ ಮಧ್ಯಪ್ರದೇಶದಿಂದ ಪ್ರತ್ಯೇಕಗೊಂಡು ಚತ್ತೀಸ್ ಗಢ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಕೂಡಲೇ ಅಜಿತ್ ಜೋಗಿ ಮೊದಲ ಮುಖ್ಯಮಂತ್ರಿಯಾಗಿ
ನೇಮಕಗೊಂಡಿದ್ದರು.