Advertisement

ಐಸಿಯು ಸ್ಥಾಪನೆಗೆ ಅನುದಾನ ಶಾಸಕ-ಸಂಸದರ ಜಿಪುಣತನ

11:13 AM Apr 08, 2017 | Team Udayavani |

ಬೆಂಗಳೂರು: ಆರೋಗ್ಯ ಕ್ಷೇತ್ರದ ಸುಧಾರಣೆ ಮತ್ತು ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ವೀರಾವೇಶದ ಮಾತನಾಡುವ ಶಾಸಕರು-ಸಂಸದರು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ “ತೀವ್ರ ನಿಗಾ ಘಟಕ’ (ಐಸಿಯು) ಸ್ಥಾಪನೆಗೆ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ಅನುದಾನ ಕೊಡುವ ಬಗ್ಗೆ “ಜಿಪುಣತನ ‘ ತೋರಿದ್ದಾರೆ.

Advertisement

ಅನುದಾನ ನೀಡುವ ವಿಚಾರದಲ್ಲಿ ಶಾಸಕರು-ಸಂಸದರ ಈ ಜಾಣ ಮೌನದಿಂದಾಗಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಐಸಿಯು ಸ್ಥಾಪಿಸುವ ಆರೋಗ್ಯ ಇಲಾಖೆಯ ಮಹತ್ವಕಾಂಕ್ಷೆಯ ಯೋಜನೆಗೆ ಕಳೆದ ಐದಾರು ತಿಂಗಳಿಂದ “ರೋಗ’ ಬಡಿದಂತಾಗಿದೆ. 2017ರ ಫೆಬ್ರವರಿ ವೇಳೆಗೆ ಎಲ್ಲಾ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಸಾಧನೆ ಮಾತ್ರ ಶೂನ್ಯ ಎಂಬಂತಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕ ಸ್ಥಾಪನೆಗೆ ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದಿಟಛಿ ನಿಧಿಯಡಿ ಅನುದಾನ ಪಡೆದುಕೊಳ್ಳಲು ಮುಂದಾಗಿರುವ ಆರೋಗ್ಯ ಇಲಾಖೆ, ಕಳೆದ ಐದು ತಿಂಗಳಿಂದ ಶಾಸಕರು-ಸಂಸದರಲ್ಲಿ ಪರಿಪರಿಯಾಗಿ ಮನವಿ ಮಾಡಿ ಕೊಳ್ಳುತ್ತಿದೆ. ರಾಜ್ಯದಲ್ಲಿ 224 ಶಾಸಕರು, 75 ವಿಧಾನಪರಿಷತ್‌ ಸದಸ್ಯರು, 28 ಲೋಕಸಭಾ ಸದಸ್ಯರು, 12 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 339 ಶಾಸಕರು-ಸಂಸದರು ಇದ್ದು, ಈವರೆಗೆ 9 ಮಂದಿ ಶಾಸಕರು, ಮೂವರು ವಿಧಾನಪರಿಷತ್‌ ಸದಸ್ಯರು ಹಾಗೂ ಇಬ್ಬರು ಸಂಸದರು ಸೇರಿ ಕೇವಲ 14 ಮಂದ ಮಾತ್ರ ಇಲ್ಲಿವರೆಗೆ ಅನುದಾನ ಕೊಡಲು ಮುಂದಾಗಿದ್ದಾರೆ.

ಅಪಘಾತ, ಉಸಿರಾಟದ ತೊಂದರೆ ಮತ್ತು ಗಂಭೀರ ಸ್ವರೂಪದ ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಒದಗಿಸಲು ಎಲ್ಲಾ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ 3 ಹಾಸಿಗೆಗಳ ಸಾಮರ್ಥಯದ ವೆಂಟಿಲೇಟರ್‌ ಸೌಲಭ್ಯ ಇರುವ ತೀವ್ರ ನಿಗಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ಆರೋಗ್ಯ ಇಲಾಖೆ, 2017ರ ಫೆಬ್ರವರಿಯೊಳಗೆ ಗುರಿ ಇಟ್ಟುಕೊಂಡಿತ್ತು. ಒಂದು ತೀವ್ರ ನಿಗಾ ಘಟಕ ಸ್ಥಾಪನೆಗೆ 22 ಲಕ್ಷ ರೂ.ಅಂದಾಜು ಮಾಡಲಾಗಿತ್ತು. ಇದಕ್ಕಾಗಿ ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ 15 ಲಕ್ಷ ರೂ. ರಾಜ್ಯಸಭಾ ಸದಸ್ಯರು ಸೇರಿದಂತೆ ಸಂಸದರ ಪ್ರದೇಶಾಭಿವೃದ್ದಿ  ನಿಧಿಯಿಂದ 5 ಲಕ್ಷ ಮತ್ತು ಸರ್ಕಾರದಿಂದ 7 ಲಕ್ಷ ರೂ. ಅನುದಾನ ಭರಿಸುವ ಯೋಜನೆ ರೂಪಿಸಲಾಗಿತ್ತು. ಅನುದಾನ ಕೊಡಿ ಎಂದು ಕಳೆದು ಐದಾರು ತಿಂಗಳಿಂದ ಹತ್ತಾರು ಬಾರಿ ಶಾಸಕರು ಸಂಸದರಿಗೆ ಮನವಿ ಮಾಡಿದ್ದರೂ, ಆರೋಗ್ಯ ಇಲಾಖೆಗೆ ಯಶಸ್ಸು ಸಿಕ್ಕಿಲ್ಲ.

ಐಸಿಯು ಘಟಕ ಸ್ಥಾಪನೆಗೆ ಕ್ಷೇತ್ರಾಭವೃದ್ದಿ  ನಿಧಿಯಿಂದ ಅನುದಾನ ಕೊಡಲು ಮುಂದಾಗಿರುವ ಪ್ರಮುಖರಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್‌, ಆರ್‌.ವಿ. ದೇಶಪಾಂಡೆ,ಟಿ.ಬಿ. ಜಯಚಂದ್ರ, ಪ್ರಮೋದ್‌ ಮಧ್ವರಾಜ್‌ ಹಾಗೂ ಸ್ವತಃ ಆರೋಗ್ಯ ಸಚಿವರಾಗಿರುವ ಕೆ.ಆರ್‌. ರಮೇಶ್‌ಕುಮಾರ್‌, ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಶಾಸಕರಾದ ಗೋವಿಂದ ಎಂ. ಕಾರಜೋಳ, ವಾಸು, ಟಿ.ಎಚ್‌. ಸುರೇಶ್‌ಬಾಬು, ವಿಧಾನಪರಿಷತ್‌ ಸದಸ್ಯರಾದ ಬಸವರಾಜ್‌ ಹೊರಟ್ಟಿ, ಕೆ.ಸಿ. ಕೊಂಡಯ್ಯ, ಎಂ.ಎ. ಗೋಪಾಲಸ್ವಾಮಿ ಹಾಗೂ ಸಂಸದರಾದ ಡಾ. ಎಂ. ವೀರಪ್ಪ ಮೊಯಿಲಿ, ಭಗವಂತ ಖೂಬಾ ಇದ್ದಾರೆ.

Advertisement

ಈ ಪೈಕಿ ಪರಮೇಶ್ವರ್‌, ರಮೇಶ್‌ ಕುಮಾರ್‌, ಟಿ.ಬಿ. ಜಯಚಂದ್ರ, ಪ್ರಮೋದ್‌ಮಧ್ವರಾಜ್‌, ಜಗದೀಶ್‌ ಶೆಟ್ಟರ್‌, ಬಸವರಾಜ ಹೊರಟ್ಟಿ, ಗೋವಿಂದ ಕಾರಜೋಳ, ಎಂ.ಎ. ಗೋಪಾಲಸ್ವಾಮಿ ತಮ್ಮ ಸ್ಥಳೀಯ ಕ್ಷೇತ್ರಾಭಿವೃದ್ದಿ  ನಿಧಿಯಿಂದ ತಲಾ 15 ಲಕ್ಷ ರೂ.ಅನುದಾನನೀಡಿದ್ದಾರೆ. ಆರ್‌.ವಿ. ದೇಶಪಾಂಡೆ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೆ, ವಾಸು ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಅದೇ ರೀತಿ, ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ 30 ಲಕ್ಷ ರೂ. ಅನುದಾನ ಕೊಟ್ಟಿದ್ದರೆ, ಶಾಸಕ ಸುರೇಶ್‌ಬಾಬು ಕಂಪ್ಲಿ ಮತ್ತು ಕುರಗೋಡು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆಗೆ ತಗಲುವ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ಬೀದರ್‌ ಸಂಸದ ಭಗವಂತ ಖೂಬಾ ಅವರು 6 ತಾಲೂಕು ಆಸ್ಪತ್ರೆಗಳಿಗೆ 30 ಲಕ್ಷ ರೂ. ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ 45 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ.

ರಾಜ್ಯದ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸ್ಥಾಪನೆಗೆ ಕ್ಷೇತ್ರಾಭಿವೃದಿಟಛಿ ನಿಧಿಯಿಂದ ಅನುದಾನ ಕೊಡಿ ಎಂದು ಶಾಸಕರು-ಸಂಸದರಿಗೆ ಮನವಿ ಮಾಡಲಾಗಿದೆ. ಕೆಲವರು ಮುಂದೆ ಬಂದಿದ್ದಾರೆ, ಇನ್ನುಳಿದವರಿಗೂ ಪುನಃ ಮನವಿ ಮಾಡುತ್ತೇವೆ.

ಶಾಸಕರು-ಸಂಸದರು ಅನುದಾನ ಬೇಗ ಕೊಟ್ಟರೆ, ಆದಷ್ಟು ಬೇಗ ಐಸಿಯು ಸ್ಥಾಪನೆ ಕಾರ್ಯ ಮುಗಿಯುತ್ತದೆ. ಇಲ್ಲದಿದ್ದರೆ ಮುಂದೇನು ಎಂಬ ಬಗ್ಗೆ ಯೋಚನೆ ಮಾಡುತ್ತೇನೆ.
– ಕೆ.ಆರ್‌.ರಮೇಶ್‌ ಕುಮಾರ್‌ ಆರೋಗ್ಯ ಸಚಿವ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next