ಹೊಸದಿಲ್ಲಿ : ‘ದೇಶದಲ್ಲಿನ ಎಲ್ಲ ವಿಮಾನ ನಿಲ್ದಾಣಗಳು ತಮ್ಮ ಸಾರ್ವಜನಿಕ ಪ್ರಕಟನೆಯನ್ನು ಮೊದಲಾಗಿ ಸ್ಥಳೀಯ ಭಾಷೆಯಲ್ಲಿ, ಅನಂತರ ಅನುಕ್ರಮವಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಡಬೇಕು’ ಎಂದು ಸರಕಾರ ಇಂದು ಬುಧವಾರ ನಿರ್ದೇಶ ಹೊರಡಿಸಿದೆ
ನಾಗರಿಕ ವಾಯು ಯಾನ ಸಚಿವ ಸುರೇಶ್ ಪ್ರಭು ಅವರು ಈ ಸಂಬಂಧ ನಿರ್ದೇಶ ಹೊರಡಿಸುವ ತಾಜಾ ಕ್ರಮವನ್ನು ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ತನ್ನ ನಿಯಂತ್ರಣದಲ್ಲಿರುವ ಎಲ್ಲ ವಿಮಾನ ನಿಲ್ದಾಣಗಳಿಗೆ, “ಎಲ್ಲ ಸಾರ್ವಜನಿಕ ಪ್ರಕಟನೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಮತ್ತು ಅನಂತರ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾಡುವಂತೆ ನಿರ್ದೇಶ ಹೊರಡಿಸಿದೆ” ಎಂದು ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.
ಇದೇ ರೀತಿ ಎಲ್ಲ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಿಗೆ ಕೂಡ ಈ ರೀತಿಯ ನಿರ್ದೇಶ ಜಾರಿ ಮಾಡಿರುವುದಾಗಿ ನಾಗರಿಕ ವಾಯು ಯಾನ ಸಚಿವಾಲಯ ತಿಳಿಸಿದೆ.
ಆದರೆ ನಿಶಬ್ದ (ಸೈಲೆಂಟ್) ವಿಮಾನ ನಿಲ್ದಾಣಗಳಿಗೆ ಈ ನಿರ್ದೇಶ ಅನ್ವಯಿಸುವುದಿಲ್ಲ; ಕಾರಣ ಅಂತಹ ವಿಮಾನ ನಿಲ್ದಾಣಗಳಲ್ಲಿ ಯಾವುದೇ ಬಾಯ್ದೆರೆಯ ಸಾರ್ವಜನಿಕ ಪ್ರಕಟನೆಗಳನ್ನು ಮಾಡಲಾಗುವುದಿಲ್ಲ.
ವಿಮಾನ ನಿಲ್ದಾಣಗಳಲ್ಲಿನ ಎಲ್ಲ ಬಾಯ್ದೆರೆಯ ಪ್ರಕಟನೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲೇ ಮಾಡಬೇಕು; ಅನಂತರದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಡಬೇಕು ಎಂದು ಕೋರಿ ಹಲವಾರು ಮನವಿಗಳು ಜನರಿಂದ ಬಂದಿರುವುದನ್ನು ಪರಿಗಣಿಸಿ ನಾಗರಿಕ ವಾಯು ಯಾನ ಸಚಿವರು (ಸುರೇಶ್ ಪ್ರಭು) ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.