ದೇವನಹಳ್ಳಿ: ಕೋವಿಡ್ ಸಂದರ್ಭದಲ್ಲಿ ಗ್ರಾಹಕರ ಅಗತ್ಯ, ಅವಶ್ಯಕತೆ ಅರ್ಥ ಮಾಡಿಕೊಳ್ಳಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸತತವಾಗಿ ಪ್ರಯತ್ನಿಸಿದ್ದು, ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ(ಕೆಐಎಬಿ) ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ ವರ್ಲ್ಡ್ನ “ವಾಯ್ಸ ಆಫ್ ಕಸ್ಟಮರ್'(ಗ್ರಾಹಕರ ಧ್ವನಿ) ಜಾಗತಿಕ ಮಾನ್ಯತೆ ಲಭಿಸಿದೆ.
2020ರ ಕೋವಿಡ್ ಸಂದರ್ಭದಲ್ಲಿ ಗ್ರಾಹಕರಿಗೆ ಆದ್ಯತೆ ನೀಡುವುದನ್ನು ಮುಂದುವರಿಸಿದ ಹಾಗೂ ಅವರ ಧ್ವನಿಗೆ ಓಗೊಟ್ಟು ವಿಮಾನ ನಿಲ್ದಾಣಗಳನ್ನು ಗುರುತಿಸುವ ಕಾರ್ಯವನ್ನು “ವಾಯ್ಸ ಆಫ್ ಕಸ್ಟಮರ್’ ಕೈಗೊಳ್ಳುತ್ತಿದೆ.
ಗಮನಾರ್ಹ ಪ್ರಯತ್ನ: ಎಸಿಐನ ಎಎಸ್‌ಕ್ಯೂ ಕಾರ್ಯ ಕ್ರಮದ ಮೂಲಕ ಎಸಿಐ ವರ್ಲ್ಡ್ನ ಪ್ರಧಾನ ನಿರ್ದೇಶಕ ಲೂಯಿಸ್ ಫೆಲಿಪೆ ಡೇ ಒಲಿವೀರಾ ಮಾತನಾಡಿ, ಗ್ರಾಹಕರ ಪ್ರತಿಕ್ರಿಯೆ ಸಂಗ್ರಹಿಸುವಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಗಮನಾರ್ಹ ಪ್ರಯತ್ನ ಕೈಗೊಂಡಿದೆ. ಕಷ್ಟದ ಪರಿಸ್ಥಿತಿಗಳಲ್ಲಿ ಉತ್ತಮ ಗ್ರಾಹಕ ಅನುಭವ ನೀಡುವತ್ತ ಬಿಐಎಎಲ್‌ನ ಬದ್ಧತೆ ಪ್ರದರ್ಶಿಸಲು ಈ ಕ್ರಮ ನೆರವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ವಿಮಾನ ಪ್ರಯಾಣ ಕುರಿತಂತೆ ಪ್ರಯಾಣಿಕರ ವಿಶ್ವಾಸ ಪುನರ್‌ನಿರ್ಮಿಸಲು, ಈ ಕುರಿತು ಸಂದೇಶ ಹರಡಲು ಹಲವು ಅಭಿಯಾನ ಕೈಗೊಳ್ಳಲಾಗಿತ್ತು ಎಂದರು.
ಜಾಗತಿಕ ಮಾನ್ಯತೆ ಸ್ವೀಕರಿಸಲು ಹೆಮ್ಮೆ: ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮಾತನಾಡಿ, ಬಿಐಎಎಲ್ ಆದ ನಾವು ಈ ಗೌರವಾನ್ವಿತ ಜಾಗತಿಕ ಮಾನ್ಯತೆ ಸ್ವೀಕರಿಸಲು ಹೆಮ್ಮೆ ಪಡುತ್ತೇವೆ. ಪ್ರಯಾಣಿಕರ ಅಗತ್ಯ ಅರ್ಥ ಮಾಡಿಕೊಳ್ಳಲು ನಮ್ಮ ತಂಡ ಕೈಗೊಂಡ ಅಪಾರ ಪ್ರಯತ್ನಗಳಿಗೆ ಈ ಗೌರವ ಸಾಕ್ಷಿಯಾಗಿದೆ ಎಂದರು.
ಇದನ್ನೂ ಓದಿ :ಕಳಂಜಿ ಮಹಿಳೆಯರಿಂದ ಕಾಲ್ನಡಿಗೆ ಜಾಥಾ
“ವೀ ಆರ್ ಹಿಯರ್ ಫಾರ್ ಯು’ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಮಾನಯಾನದಲ್ಲಿನ ಸುರಕ್ಷತೆ ಕಡೆಗೆ ಪ್ರಯಾಣಿಕರ ಗ್ರಹಿಕೆಯನ್ನು ಅರ್ಥ ಮಾಡಿಕೊಳ್ಳಲು “ವಾಯ್ಸ ಆಫ್ ಪ್ಯಾಕ್ಸ್’ ಸಮೀಕ್ಷೆಯನ್ನು ಹಂತ ಹಂತವಾಗಿ ನಡೆಸಲಾಯಿತು. ಸ್ವೀಕರಿಸಲಾದ ವಿವರ ಆಧರಿಸಿ, ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಹಲವು ಅಭಿಯಾನ ನಡೆಸಲಾಯಿತು. ನೂತನ ಸಂಪರ್ಕರಹಿತ ಪ್ರಯಾಣ, ವೈಯಕ್ತಿಕ ನೈರ್ಮಲ್ಯತೆ ಕಾಪಾಡಿಕೊಳ್ಳುವುದು, ಮುಂಚೂಣಿಯಲ್ಲಿರುವ ತಂಡದ ಪ್ರಯತ್ನ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿಸುವುದು ಈ ಅಭಿಯಾನದಲ್ಲಿ ಸೇರಿದ್ದವು ಎಂದರು.