Advertisement

ಸೇನೆಯ ಪ್ರತ್ಯುತ್ತರಕ್ಕೆ ವ್ಯಾಪಕ ಶ್ಲಾಘನೆ

12:18 AM Feb 27, 2019 | Team Udayavani |

ಬೆಂಗಳೂರು: ಜಮ್ಮು -ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ರಾಜ್ಯದೆಲ್ಲೆಡೆ ಸಿಹಿ ವಿತರಿಸಿ-ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

Advertisement

ಮೈಸೂರು ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅಗ್ರಹಾರ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಕೋಲಾರ ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಟಾಕಿ ಸಿಡಿಸಿ ತಮಟೆ ಬಾರಿಸಿ ಜನರಿಗೆ ಸಿಹಿ ಹಂಚಿದ ಕಾರ್ಯಕರ್ತರು, ಉಗ್ರವಾದದ ವಿರುದ್ಧ   ಭಾರತ ದಿಟ್ಟ ಉತ್ತರ ನೀಡಿದೆ ಎಂದು ಸಂಭ್ರಮಿಸಿದರು. ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು, ಚಾಮರಾಜನಗರದಲ್ಲಿ ಆಜಾದ್‌ ಹಿಂದೂ ಸೇನೆ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು. ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಭಾರತ ಧ್ವಜವನ್ನು ಪ್ರದರ್ಶಿಸಿ ದೇಶಭಕ್ತಿ ಮರೆದರು.

ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರಿನಲ್ಲೂ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಮಂಗಳೂರು, ಉಡುಪಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ ಸೇರಿ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಿಸಿದರು.

Advertisement

ಸೇನೆಗೆ ಸೆಲ್ಯೂಟ್‌ ಮಾಡಿದ ಕಲಾವತಿ
ಭಾರತೀನಗರ: ಪುಲ್ವಾಮಾ ದಾಳಿಗೆ ಏರ್‌ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಭಾರತ ಪ್ರತಿಕಾರ ತೀರಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಹುತಾತ್ಮ ಯೋಧ ಎಚ್‌.ಗುರು ಅವರ ಪತ್ನಿ ಕಲಾವತಿ ತಿಥಿ ಕಾರ್ಯದ ಸಮಾಧಿ ಸ್ಥಳದಲ್ಲಿ ಎದ್ದುನಿಂತು ಭಾರತೀಯ ಸೇನೆಗೆ ಸೆಲ್ಯೂಟ್‌ ಮಾಡಿದರು. ನಂತರ ಮಾತನಾಡಿದ ಅವರು, ನನ್ನ ಪತಿಯ ಪುಣ್ಯತಿಥಿ ದಿನದಂದೇ ಭಾರತೀಯ ಸೇನೆ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿರುವುದು ನನಗೆ ಖುಷಿಯಾಗಿದೆ. ನಮ್ಮ ಸೈನಿಕರ ಬಗ್ಗೆ ಹೆಮ್ಮೆಯೆನಿಸುತ್ತಿದೆ. ನಮ್ಮ ದೇಶದ ಸೈನಿಕರಿಗೆ ಆಯಸ್ಸು, ಆರೋಗ್ಯ ಕೊಟ್ಟು ದೇವರು ಕಾಪಾಡಲಿ ಎಂದರು. ಆದರೆ ಇಂತಹ ಪ್ರತೀಕಾರದ ದಾಳಿಗಳು ಪಾಕ್‌ ಮೇಲೆ ನಿಲ್ಲಬಾರದು. ಮತ್ತಷ್ಟು ನಡೆಯುತ್ತಿರಬೇಕು. ಶಾಂತಿ ಮಾತುಕತೆ ಬೇಡ ಯುದಟಛಿ ಬೇಕು. ಪಾಕಿ ಸ್ತಾನ ನಿರ್ನಾಮವಾಗಬೇಕೆಂದು ಹೇಳಿದರು.ಗುರು  ತಂದೆ ಹೊನ್ನಯ್ಯ ಮಾತನಾಡಿ, ದಾಳಿ ನಡೆಸಿದ್ದು ತುಂಬಾ ಸಂತೋಷದ ವಿಚಾರ. ನನ್ನ ಮಗನ ಮೇಲೆ ದಾಳಿ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದರು.

ಎಚ್‌ಡಿಕೆ ಸ್ವಾಗತ: ಭಾರತೀಯ ಸೇನೆ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಜೈಶ್‌ ಉಗ್ರರ ಅಡಗುದಾಣ ನಾಶಪಡಿಸಿರುವುದನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ದಾಳಿ ಬಗ್ಗೆ ಚರ್ಚೆ ಅನಗತ್ಯ. ಸರ್ಜಿಕಲ್‌ ಆಪರೇಷನ್‌ ಅಗತ್ಯವಿತ್ತು. ಉಗ್ರ ಗಾಮಿಗಳ ದಾಳಿಗೆ ಪ್ರತಿಕಾರ ಆಗಬೇಕಿತ್ತು. ಅದನ್ನು ದೇಶದ ಜನ ಬಯಸಿದ್ದರು ಎಂದು ಪ್ರತಿಕ್ರಿಯಿಸಿದರು. ವಾಯು ದಾಳಿಯನ್ನುದೇಶದ ಜನರು ಸ್ವಾಗತಿಸುತ್ತಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಇಂತಹ ಕ್ರಮಗಳನ್ನು ಬೆಂಬಲಿಸಬೇಕು. ಆದರೆ ಇದು ರಾಜಕೀಯಕ್ಕೆ ಬಳಕೆಯಾಗಬಾರದು ಎಂದರು.

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಬೆಂಗಳೂರು:
ಬಿಜೆಪಿ ರಾಜ್ಯ ಕಚೇರಿ ಎದುರು ನಡೆದ ಸಂಭ್ರಮಾಚರಣೆಯಲ್ಲಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ, ರಾಜ್ಯ ಬಿಜೆಪಿ ಸಹ ವಕ್ತಾರರಾದ ಅನ್ವರ್‌ ಮಾಣಿಪ್ಪಾಡಿ, ಎಸ್‌.ಪ್ರಕಾಶ್‌ ಇತರರು ಪಾಲ್ಗೊಂಡಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ, ಘೋಷಣೆ ಕೂಗಿ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ವಿವಿ ಗೋಪುರದಲ್ಲಿರುವ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪ್ರಧಾನಿ ಮೋದಿಯವರು ನುಡಿದಂತೆ ನಡೆದಿದ್ದಾರೆ. ಇದನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ ಎಂದರು.

ಟ್ವೀಟರ್‌ನಲ್ಲಿ ಅಭಿನಂದನೆ ಸುರಿಮಳೆ: ಭಾರತೀಯ ವಾಯುಪಡೆಯ ಪ್ರತಿದಾಳಿ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಾಯುಪಡೆಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next