Advertisement
ಸಾಮಾನ್ಯವಾಗಿ ಮುಂದಿನ ಪ್ರದರ್ಶನ ನಡೆಯುವ ಸ್ಥಳವನ್ನು ಹಿಂದಿನ ಅಂದರೆ ಪ್ರಸ್ತುತ ವೈಮಾನಿಕ ಪ್ರದರ್ಶನದಲ್ಲೇ ಘೋಷಿಸುವುದು ವಾಡಿಕೆ. ಆದರೆ, 2017ರಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗಿದೆ. ಈ ಬೆಳವಣಿಗೆ ನಂತರದಿಂದ ಪ್ರತಿ ಬಾರಿ ಸ್ಥಳಾಂತರದ ಕೂಗು ಜೋರಾಗುತ್ತಿದೆ.
Related Articles
Advertisement
ಚುನಾವಣೆ ಹಿನ್ನೆಲೆ; ಮತ್ತಷ್ಟು ಸೂಕ್ಷ್ಮ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಗೊಂದಲ ನಿವಾರಣೆ ಮಾಡಬಹುದಿತ್ತು. ಆದರೆ, ಈ ಬಗ್ಗೆ ಪ್ರಸ್ತಾಪಿಸಲಿಲ್ಲ. ಭಾರತೀಯ ವಾಯುಸೇನೆ ಸೇರಿದಂತೆ ರಕ್ಷಣಾ ಇಲಾಖೆಯೂ ಇದನ್ನು ಗೌಪ್ಯವಾಗಿಯೇ ಇಟ್ಟಿದೆ. ಲೋಕಸಭೆ ಚುನಾವಣೆ ಕೂಡ ಹೊಸ್ತಿಲಲ್ಲಿ ಇರುವುದರಿಂದ ಈ ವಿಚಾರ ಮತ್ತಷ್ಟು ಸೂಕ್ಷ್ಮವಾಗಿದೆ. ಈ ಮಧ್ಯೆ ವೈಮಾನಿಕ ಪ್ರದರ್ಶನದ ಆಸುಪಾಸು ನಡೆದ ಅಹಿತಕರ ಘಟನೆಗಳು ಸ್ಥಳಾಂತರದ ಕೂಗಿಗೆ ಪುಷ್ಠಿ ನೀಡಿದಂತಾಗಿದೆ.
ಫೆಬ್ರವರಿ 1ರಂದು “ಮಿರಾಜ್-2000′ ತರಬೇತಿ ಯುದ್ಧವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು. ತದನಂತರ ಪ್ರದರ್ಶನದ ಹಿಂದಿನ ದಿನವೇ ಸೂರ್ಯಕಿರಣ ತಂಡದ ಎರಡು ತರಬೇತಿ ಯುದ್ಧವಿಮಾನಗಳು ಡಿಕ್ಕಿಹೊಡೆದು, ಪೈಲಟ್‌ವೊಬ್ಬರು ಮೃತಪಟ್ಟರು. ಪ್ರದರ್ಶನದ ನಾಲ್ಕನೇ ದಿನ ನಿಲುಡೆ ಪ್ರದೇಶದಲ್ಲಿ 300ಕ್ಕೂ ಅಧಿಕ ಕಾರುಗಳು ಬೆಂಕಿಗಾಹುತಿಯಾದವು.
“ಬೆಂಗಳೂರು ಶಾಶ್ವತ ನೆಲೆ ಆಗಲಿ’; ವಿಜಯ್ ಭಾಸ್ಕರ್: ವೈಮಾನಿಕ ಕ್ಷೇತ್ರದ ರಾಜಧಾನಿ ಬೆಂಗಳೂರು. ಹಾಗಾಗಿ, ವೈಮಾನಿಕ ಪ್ರದರ್ಶನ ನಡೆಯುವ ಶಾಶ್ವತ ನೆಲೆಯನ್ನಾಗಿ ಉದ್ಯಾನ ನಗರಿಯನ್ನು ಘೋಷಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಮನವಿ ಮಾಡಿದರು. ಐದು ದಿನಗಳ 12ನೇ “ಏರೋ ಇಂಡಿಯಾ ಶೋ’ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಬೆಂಗಳೂರು ಮಾತ್ರವಲ್ಲ; ಈಚೆಗೆ ಬೆಳಗಾವಿಗೆ ಕೂಡ ಏರೋಸ್ಪೇಸ್ ಪಾರ್ಕ್ ಬರುತ್ತಿದೆ. ಪ್ರತಿ ಪ್ರದರ್ಶನದಲ್ಲಿ ಪ್ರದರ್ಶಕರ ಸಂಖ್ಯೆ ಮತ್ತು ಹೂಡಿಕೆ ಪ್ರಮಾಣ ಹೆಚ್ಚುತ್ತಿದೆ. ಈ ಎಲ್ಲ ದೃಷ್ಟಿಯಿಂದ ಬೆಂಗಳೂರನ್ನು ವೈಮಾನಿಕ ಪ್ರದರ್ಶನದ ಶಾಶ್ವತ ನೆಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
* ವಿಜಯಕುಮಾರ ಚಂದರಗಿ