ಹುಮನಾಬಾದ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕಾ ಘಟಕಗಳು ವಿಪರೀತ ವಾಯು ಮಾಲಿನ್ಯ ಉಂಟು ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಬಳ್ಳಾರಿಯ ವಾಯು ಮಾಲಿನ್ಯ ಪರೀಕ್ಷೆ ನಡೆಸುವ ವಾಹನ ಬುಧವಾರ ಕೈಗಾರಿಕಾ ಪ್ರದೇಶದಲ್ಲಿನ ಗಾಳಿ ಗುಣಮಟ್ಟ ಪರೀಕ್ಷೆ ನಡೆಸುವ ಕಾರ್ಯ ಆರಂಭಿಸಿದೆ.
ಕಳೆದ ಒಂದು ದಶಕದಿಂದ ಕೈಗಾರಿಕಾ ಪ್ರದೇಶದ ಸುತ್ತಲಿನ ಗಡವಂತಿ, ಮಾಣಿಕನಗರ, ಬಸವಂತಪೂರ್, ಮೋಳಕೇರಾ ಗ್ರಾಮಸ್ಥರು ಪರಿಸರಕ್ಕೆ ಹಾನಿ ಉಂಟಾಗುತ್ತಿರುವ ಕುರಿತು ಅನೇಕ ಬಾರಿ ವಾಯು ಮಾಲಿನ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ರಾಜಕೀಯ ಜನಪ್ರತಿನಿ ಧಿಗಳು ವಿವಿಧ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಅಲ್ಲದೆ, ಜನಪರ ಕಾಳಜಿ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ವಿಶೇಷ ವರದಿಗಳು ಉದಯವಾಣಿ ಪ್ರಕಟ ಮಾಡಿತ್ತು. ಕಳೆದ ಕೆಲ ತಿಂಗಳಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮುಖಂಡ ಭಜರಂಗ ನೇತೃತ್ವದಲ್ಲಿ ಸಂಬಂಧಿಸಿದ ರಾಜ್ಯಪಾಲರು ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಪರಿಸರ ಹಾನಿ ಉಂಟು ಮಾಡುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗಾಳಿ ಗುಣಮಟ್ಟ ಪರೀಕ್ಷೆ ನಡೆಸುವ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಆಧುನಿಕ ವಾಹನವೊಂದು ಪ್ರಥಮ ಬಾರಿ ಹುಮನಾಬಾದ ಪಟ್ಟಣಕ್ಕೆ ಬಂದಿದೆ. ಕಳೆದ ಅನೇಕ ವರ್ಷಗಳಿಂದ ಇಲ್ಲಿನ ಜನರ ಪರಿಸರ ಮಾಲಿನ್ಯ ಕುರಿತು ಸಲ್ಲಿಸಿದ ದೂರುಗಳ ಹಿನ್ನೆಲೆಯಲ್ಲಿ ಗಾಳಿ ಗುಣಮಟ್ಟ ಸೇರಿದಂತೆ ಇತರೆ ಪರೀಕ್ಷೆ ನಡೆಸುವ ಕಾರ್ಯ ಆರಂಭಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ವಿವಿಧೆಡೆ ಪರೀಕ್ಷೆ ನಡೆಸಲಿದೆ. ಕೈಗಾರಿಕೆಗಳ ಸುತ್ತಲಿನ ಮೂರು ಕಿ.ಮೀ. ದೂರದ ವರೆಗಿನ ಮಾಲಿನ್ಯ ಪತ್ತೆ ಮಾಡುವ ಹೈಟೆಕ್ ವಾಹನ ಇದಾಗಿದ್ದು, ಬೇಕಾಬಿಟ್ಟಿಯಾಗಿ ಗಾಳಿಯಲ್ಲಿ ಅನಿಲ ಬಿಡುತ್ತಿದ್ದ ಕೈಗಾರಿಕೆಗಳ ಮಾಲೀಕರಿಗೆ ಚುರುಕು ಮುಟ್ಟಿಸಿ ಸಾಧ್ಯತೆ ಇದೆ.
ಸಾರ್ವಜನಿಕರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ ತಕ್ಷಣ ಮಂಡಳಿಯ ಅಧಿಕಾರಿಗಳು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರದ ಅಧಿಕಾರಿಗಳಿಗೆ ಸಂದೇಶ ರವಾನಿಸಿ ಅಲ್ಲಿಯ ಅಧಿಕಾರಿಗಳು ತಕ್ಷಣ ಕೈಗಾರಿಕೆ ಪ್ರದೇಶಕ್ಕೆ ವಾಹನ ಕಳಿಸುತ್ತಿದ್ದಾರೆ. ಆಧುನಿಕ ಉಪಕರಣ ಹೊಂದಿರುವ ಸಂಚಾರ ವಾಹನ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದೆ. ಗಾಳಿಯಲ್ಲಿ ಯಾವ ಪ್ರಮಾಣದ ಮಾಲಿನ್ಯ ಇದೆ. ಸಣ್ಣ ಪ್ರಮಾಣದ ಮಣ್ಣಿನ ಕಣಗಳು, ಅನಿಲ ಸೇರಿದಂತೆ 8 ತರಹದ ಪರೀಕ್ಷೆಯ ವರದಿ ಬರುತ್ತದೆ. ಅಲ್ಲದೇ ಯಾವ ಕಾರ್ಖಾನೆಗಳು ಎಷ್ಟು ಪ್ರಮಾಣದ ಮಾಲಿನ್ಯ ಉಂಟು ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.