ನವದೆಹಲಿ: ಮುಂಬೈನಲ್ಲಿ ಮಾಲಿನ್ಯದ ಪ್ರಮಾಣ ವಿಪರೀತವಾಗಿದೆ ಎಂದು ಭಾರತ-ಶ್ರೀಲಂಕಾದ ನಡುವಿನ ಗುರುವಾರದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ಹೇಳಿದ್ದರು. ನಮ್ಮ ಭವಿಷ್ಯದ ಜನಾಂಗದ ಒಳಿತಿಗಾಗಿ ಸಂಬಂಧಪಟ್ಟ ವ್ಯಕ್ತಿಗಳು ಈ ಬಗ್ಗೆ ಗಮನಹರಿಸಲೇಬೇಕು ಎಂದು ಅವರು ಆಗ್ರಹಿಸಿದ್ದರು. ಇದರ ನಡುವೆ ಇಂಗ್ಲೆಂಡ್ ಆಟಗಾರರು ಇನ್‌ಹೇಲರ್ ಗಳನ್ನು ಬಳಸುತ್ತಿರುವ ಬಗ್ಗೆ ಇಂಗ್ಲೆಂಡ್ ಪತ್ರಿಕೆಗಳು ವರದಿ ಮಾಡಿವೆ.
ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ 400ರ ಗಡಿ ದಾಟಿದೆ. ಮುಂಬೈನಲ್ಲೂ ಹಾಗೆಯೇ ಇದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸರಾಗ ಉಸಿರಾಟಕ್ಕಾಗಿ ಇನ್‌ಹೇಲರ್ ಬಳಸಿದ್ದಾರೆ. ಅಸ್ತಮಾ ರೋಗಿಗಳು ಮಾತ್ರ ಬಳಸುವ ಇನ್‌ಹೇಲರ್‌ಗಳನ್ನು ಇತರರು ಬಳಸುವುದಿಲ್ಲ.
ಇಂಗ್ಲೆಂಡ್ ಕ್ರಿಕೆಟರ್‌ಗಳು ಅನಿವಾರ್ಯವಾಗಿ ಇನ್ ಹೇಲರ್‌ಗಳ ಮೊರೆ ಹೋಗಿದ್ದಾರೆ ಎಂದು “ಐ’ ಪತ್ರಿಕೆ ವರದಿ ಮಾಡಿದೆ.
ಪರಿಸ್ಥಿತಿ ನಿಜಕ್ಕೂ ಚೆನ್ನಾಗಿಲ್ಲ: ರೋಹಿತ್ ಶರ್ಮ
ಭಾರತ-ಶ್ರೀಲಂಕಾ ಪಂದ್ಯಕ್ಕೂ ಮುನ್ನ ಮಾತಾಡಿದ ರೋಹಿತ್ ಶರ್ಮ, ಒಂದು ಉತ್ತಮ ಪ್ರಪಂಚದಲ್ಲಿ ಇಂತಹ ಮಲಿನ ಪರಿಸ್ಥಿತಿಯನ್ನು ಬಯಸುವುದಿಲ್ಲ. ಆದರೆ ಸಂಬಂಧಪಟ್ಟ ವ್ಯಕ್ತಿಗಳು ಇದರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಪರಿಸ್ಥಿತಿ ಸರಿಯಿಲ್ಲವೆನ್ನುವುದು ಎಲ್ಲರಿಗೂ ಗೊತ್ತು. ನಮ್ಮ ಭವಿಷ್ಯದ ಪೀಳಿಗೆಗಳನ್ನು ನೋಡಿದಾಗ, ನಿಮ್ಮ ಮಕ್ಕಳು, ನನ್ನ ಮಕ್ಕಳನ್ನು ಗಮನಿಸಿದಾಗ ಅವರೆಲ್ಲ ಭಯರಹಿತರಾಗಿ ಬದುಕುವುದು ಅಗತ್ಯವಿದೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕನ ಈ ಹೇಳಿಕೆ ಭಾರೀ ಗಮನ ಸೆಳೆದಿದೆ.