ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ತನ್ನ ವಿಮಾನ ಸಿಬ್ಬಂದಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಠಿಣ ಮಾರ್ಗಸೂಚಿಯು ಸಿಬ್ಬಂದಿಯ ಅಸಮಾಧಾನಕ್ಕೆ ಹಾಗೂ ಗೊಣಗಾಟಕ್ಕೆ ಕಾರಣವಾಗಿದೆ.
ಮಾರ್ಗಸೂಚಿಯ ಪ್ರಕಾರ, ವಿಮಾನ ಸಿಬ್ಬಂದಿಯು ಕೂದಲಿಗೆ ಬೂದು ಬಣ್ಣವನ್ನು ಹಾಕಬಾರದು. ಹೆನ್ನಾ ಹಾಗೂ ಇತರೆ ಫ್ಯಾಷನ್ ಕಲರ್‌ಗಳಿಗೆ ಅವಕಾಶ ಇಲ್ಲ. ಪ್ರಾಕೃತಿಕ ಬಣ್ಣವನ್ನು ಮಾತ್ರ ಬಳಿದುಕೊಳ್ಳಬಹುದು.
ಕಡಿಮೆ ಕೂದಲು ಇರುವ ಪುರುಷ ಸಿಬ್ಬಂದಿಯು ತಲೆ ಕೂದಲು ಬೋಳಿಸಿಕೊಳ್ಳಬೇಕು. ಮದುವೆ ಉಂಗುರವನ್ನು ಮಾತ್ರ ಪುರುಷ ಸಿಬ್ಬಂದಿ ಧರಿಸಬೇಕು. ಅದರಲ್ಲೂ ವಿಪರೀತವೆನ್ನುವಂಥ ವಿನ್ಯಾಸವಿರುವ ಉಂಗುರಕ್ಕೆ ಅವಕಾಶವಿಲ್ಲ. ಸಿಖ್ ಧರ್ಮದ ಸಿಬ್ಬಂದಿ 0.5 ಸೆ.ಮೀ. ಒಳಗಿನ ಧಾರ್ಮಿಕ ಬ್ರೇಸ್‌ಲೆಟ್ ಮಾತ್ರ ಧರಿಸಬಹುದು.
ಮಹಿಳಾ ಸಿಬ್ಬಂದಿ ಮುತ್ತಿನ ಆಭರಣಗಳನ್ನು ಧರಿಸುವಂತಿಲ್ಲ. ಯಾವುದೇ ವಿಶೇಷ ವಿನ್ಯಾಸ ಇಲ್ಲದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಧರಿಸಬಹುದು ಎಂದು ಹೇಳಿದೆ. “ಹೊಸ ಮಾರ್ಗಸೂಚಿಗಳು ತುಂಬ ಕಠಿಣವಾಗಿದೆ. ಇದು ವಿಮಾನ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ,’ ಎಂದು ಏರ್‌ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾವನ್ನು ಜನವರಿಯಲ್ಲಿ ಟಾಟಾ ಗ್ರೂಪ್ ಖರೀದಿಸಿತು. ಪ್ರಯಾಣಿಕರಿಗೆ ಒದಗಿಸುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟಾಟಾ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.