Advertisement

ಏರ್‌ ಇಂಡಿಯಾ ಘರ್‌ ವಾಪಸಿ: ಬಂಡವಾಳ ವಾಪಸ್‌ ಮಾಡುವ ಹಿಂದಿನ ಕಥೆ ಏನು?

08:54 AM Oct 09, 2021 | Team Udayavani |
ಮಹಾರಾಜ, ಏರ್‌ ಇಂಡಿಯಾ…. ಹೀಗೆ ಹಲವು ನಾಮ ವಿಶೇಷಣಗಳನ್ನು ಹೊಂದಿದೆ ಏರ್‌ ಇಂಡಿಯಾ. ಖಾಸಗಿಯವರಿಗೆ ಅದನ್ನು ಮಾರಬೇಕೋ ಬೇಡವೋ ಎಂಬ ಬಗ್ಗೆ ಕೇಂದ್ರ ಸರಕಾರಗಳು ಅಳೆದೂ ಸುರಿದೂ ತೀರ್ಮಾನ ಮಾಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಧೈರ್ಯದಿಂದ ನಿರ್ಧಾರ ಮಾಡಿ, ಸರಕಾರಿ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಿದೆ. ಅದೂ, ಸಂಸ್ಥಾಪಕರಿಗೇ ಅಂದರೆ ಟಾಟಾ ಸನ್ಸ್‌ಗೆ. ಹೀಗಾಗಿ ಈ ಒಟ್ಟೂ ಕಥೆ-ವ್ಯಥೆಯನ್ನು ನೋಡೋಣ…
Now pay only for what you want!
This is Premium Content
Click to unlock
Pay with

ಮಹಾರಾಜ, ಏರ್‌ ಇಂಡಿಯಾ…. ಹೀಗೆ ಹಲವು ನಾಮ ವಿಶೇಷಣಗಳನ್ನು ಹೊಂದಿದೆ ಏರ್‌ ಇಂಡಿಯಾ. ಖಾಸಗಿಯವರಿಗೆ ಅದನ್ನು ಮಾರಬೇಕೋ ಬೇಡವೋ ಎಂಬ ಬಗ್ಗೆ ಕೇಂದ್ರ ಸರಕಾರಗಳು ಅಳೆದೂ ಸುರಿದೂ ತೀರ್ಮಾನ ಮಾಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಧೈರ್ಯದಿಂದ ನಿರ್ಧಾರ ಮಾಡಿ, ಸರಕಾರಿ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಿದೆ. ಅದೂ, ಸಂಸ್ಥಾಪಕರಿಗೇ ಅಂದರೆ ಟಾಟಾ ಸನ್ಸ್‌ಗೆ. ಹೀಗಾಗಿ ಈ ಒಟ್ಟೂ ಕಥೆ-ವ್ಯಥೆಯನ್ನು ನೋಡೋಣ…

Advertisement

ಬಂಡವಾಳ ವಾಪಸ್‌ ಮಾಡುವ ಹಿಂದಿನ ಕಥೆ

ಸರಕಾರಿ ವಿಮಾನ ಸಂಸ್ಥೆಯ ಪರಿಸ್ಥಿತಿ ಕಷ್ಟ. ಅದನ್ನು ಸುಧಾರಿಸದಿದ್ದರೆ ಮುಂದಿನ ದಿನಗಳು ಕಷ್ಟ ಎಂಬ ನಿರ್ಧಾರಕ್ಕೆ 2001ರಲ್ಲಿ ಆಗ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಸರಕಾರ ಚಿಂತನೆ ಮಾಡಿತ್ತು. ಆರಂಭದಲ್ಲಿ ಶೇ.40ರಷ್ಟು ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಉದ್ದೇಶ ಹೊಂದಲಾಗಿತ್ತು. ಲುಫ್ತಾನ್ಸಾ, ಸ್ವಿಸ್‌ ಏರ್‌, ಏರ್‌ಫ್ರಾನ್ಸ್‌-ಡೆಲ್ಟಾ, ಬ್ರಿಟಿಷ್‌ ಏರ್‌ವೆàಸ್‌ ಸರಕಾರದ ವಿಮಾನ ಕಂಪೆನಿ ಖರೀದಿಗೆ ಆಸಕ್ತಿ ವಹಿಸಿದ್ದವು. ಇದರ ಜತೆಗೆ ಕಾರ್ಪೊರೇಟ್‌ ಸಂಸ್ಥೆಗಳಾಗಿರುವ ಹಿಂದೂಜಾ ಗ್ರೂಪ್‌ ಮತ್ತು ಟಾಟಾ ಗ್ರೂಪ್‌ ಕೂಡ ಒಂದು ಕೈ ನೋಡಿಯೇ ಬಿಡೋಣ ಎಂದು ಕಣಕ್ಕೆ ಇಳಿದವು.

1990ರ ದಶಕದಿಂದ ಶುರು?

1991ರ ವರೆಗೆ ದೇಶದ ವಿಮಾನ ಯಾನ ಕ್ಷೇತ್ರದಲ್ಲಿ ಏರ್‌ ಇಂಡಿಯಾ, ಇಂಡಿಯನ್‌ ಏರ್‌ಲೈನ್ಸ್‌ಗಳದ್ದೇ ಪಾರಮ್ಯವಾಗಿತ್ತು. 1991ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹ ರಾವ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ದೇಶದ ಅರ್ಥ ವ್ಯವಸ್ಥೆಯನ್ನು ಉದಾರೀಕರಣಕ್ಕಾಗಿ ತೆರೆದಿಟ್ಟಿತು. ಈ ಸಂದರ್ಭದಲ್ಲಿ ಡೆಕ್ಕನ್‌ ಏರ್‌ವೇಸ್, ಏರ್‌ವೇಸ್ ಇಂಡಿಯಾ, ಭಾರತ್‌ ಏರ್‌ವೇಸ್, ಎನ್‌ಇಪಿಸಿ ಏರ್‌ಲೈನ್ಸ್‌, ಕಳಿಂಗ ಏರ್‌ವೇಸ್, ಹಿಮಾಲಯನ್‌ ಏರ್‌ವೇಸ್ ಗಳು, ಏರ್‌ ಸಹರಾ ಹೀಗೆ ಹಲವು ಸಂಸ್ಥೆಗಳು ಆಕರ್ಷಕವಾಗಿ ವಿಮಾನ ಸೇವೆ ನೀಡಲು ಶುರು ಮಾಡಿದ್ದವು. ಖಾಸಗಿ ಸಂಸ್ಥೆಗಳ ಪೈಕಿ ಅಗ್ರಗಣ್ಯ ಎಂಬ ಸಂಸ್ಥೆಯಂತೆ ಬೆಳೆದು ಬಂದದ್ದು 1993ರಲ್ಲಿ ಉದ್ಯಮಿ ನರೇಶ್‌ ಗೋಯಲ್‌ ಸ್ಥಾಪಿಸಿದ ಜೆಟ್‌ ಏರ್‌ಏರ್‌ವೇಸ್ ನಿಂದ. ಖಾಸಗಿಯವರಿಗೆ ಅವಕಾಶ ಕೊಡಲು ಏರ್‌ ಕಾರ್ಪೊರೇಶ‌ನ್‌ ಆ್ಯಕ್ಟ್ ಅನ್ನು ರದ್ದುಗೊಳಿಸ ಲಾಯಿತು. ಹೀಗೆ ಆರಂಭದಲ್ಲಿ ಉತ್ತಮವಾಗಿ ವೃತ್ತಿಪರ ಸೇವೆ ನೀಡುತ್ತಿದ್ದ ಖಾಸಗಿ ವಿಮಾನಯಾನ ಕಂಪೆನಿಗಳಿಂದಾಗಿ ಏರ್‌ ಇಂಡಿಯಾ, ಇಂಡಿಯನ್‌ ಏರ್‌ಲೈನ್ಸ್‌ಗೆ ಧಕ್ಕೆಯಾಗಲಾರಂಭಿಸಿತು. ಬದಲಾಗಿದ್ದ ಸ್ಥಿತಿಗೆ ಸರಕಾರಿ ಸಂಸ್ಥೆ ತೆರೆದುಕೊಳ್ಳಲಿಲ್ಲ. ಹೀಗಾಗಿ ನಿಧಾನಕ್ಕೆ ಲಾಭದ ಪ್ರಮಾಣ ಕಡಿಮೆಯಾಗಿ, ನಷ್ಟದ ಅಂಶ ಹೆಚ್ಚಾಯಿತು.

Advertisement

ಮೂರು ಸಂಸ್ಥೆಗಳ ವಿಲೀನ ಸಾಧ್ಯತೆ

ಮೂರು ಪ್ರತ್ಯೇಕ ವಿಮಾನಯಾನ ಸಂಸ್ಥೆಗಳನ್ನು ಟಾಟಾ ಸನ್ಸ್‌ ನಡೆಸುವುದು ಕಷ್ಟ ಎಂದೇ ವಿಶ್ಲೇಷಿಸಲಾಗುತ್ತದೆ. ಏರ್‌ ಇಂಡಿಯಾ, ವಿಸ್ತಾರ, ಏರ್‌ ಏಷ್ಯಾ ಇಂಡಿಯಾವನ್ನು ಒಗ್ಗೂಡಿಸಿ ಹೊಸ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಬಹುದು. ಒಂದು ವೇಳೆ, ಇಂಥ ಪ್ರಯತ್ನ ನಡೆದದ್ದೇ ಆದಲ್ಲಿ ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ವಿಮಾನಯಾನ ಕಂಪೆನಿ ಆಗುವ ಸಾಧ್ಯತೆ ಇದೆ. ದೇಶೀಯ, ಅಂತಾ­ರಾಷ್ಟ್ರೀಯ ಮಾರ್ಗಗಳು, ಸ್ಥಿರ-ಚರ ಸೊತ್ತುಗಳು ಸೇರಿ ಕೋಟ್ಯಂತರ ರೂ. ಮೌಲ್ಯದ ಕಂಪೆನಿಯಾಗಿ ಮಾರ್ಪಾ­ಡಾಗುವ ಸಾಧ್ಯತೆಗಳು ಅಧಿಕ­ವಾಗಿವೆ.

ಟಾಟಾ ಮತ್ತು ಏರ್‌ ಇಂಡಿಯಾ

ಜೆಹಾಂಗೀರ್‌ ರತನ್‌ ಜಿ ದಾದಾ ಭಾಯ್‌ ಟಾಟಾ- ಜೆ.ಆರ್‌.ಡಿ. ಟಾಟಾ (ಜು.29 1904-ನ.29 1993) ದೇಶದ ಮೊದಲ ಪರವಾನಿಗೆ ಹೊಂದಿದ್ದ ಪೈಲಟ್‌. ಅವರ ತಾಯಿ ಸುಝಾನ್ನೆ ಬೆರಿ ದೇಶದಲ್ಲಿಯೇ ಮೊದಲ ಬಾರಿಗೆ ಕಾರು ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದರು. ಆರಂಭದಲ್ಲಿ ಟಾಟಾ ಏರ್‌ ಸರ್ವಿಸಸ್‌ ಹೆಸರಿನಿಂದ ಅದು ಕಾರ್ಯಾಚರಣೆ ಮಾಡುತ್ತಿತ್ತು. ಜೆ.ಆರ್‌.ಡಿ.ಟಾಟಾ ಅವರು, ಒಂದೇ ಎಂಜಿನ್‌ನ “ಡೆ ಹೆವಿಲ್ಯಾಂಡ್‌ ಪಸ್‌ ಮೋತ್‌’ (de Havilland Puss Moth)ವಿಮಾನವನ್ನು ಕರಾಚಿಯಿಂದ ಅಂದಿನ ಬಾಂಬೆ (ಮುಂಬಯಿ)ಗೆ ಅ.15, 1932ರಂದು ಹಾರಿಸಿ ಕೊಂಡು ಬಂದಿ­ದ್ದರು. ಅನಂತರ ಅವರು ಹಿಂದಿನ ಮದ್ರಾಸ್‌ (ಚೆನ್ನೈ) ವರೆಗೆ ಆ ವಿಮಾ­ನ­ದಲ್ಲಿಯೇ ಪ್ರಯಾಣಿಸಿದ್ದರು. ಇದು ದೇಶದ ಮೊದಲ ಅಧಿಕೃತ ವಿಮಾನಯಾನ. ಆರಂಭದ ವರ್ಷಗಳಲ್ಲಿ ಬಾಂಬೆಯಿಂದ ಕರಾಚಿ, ಅಹ್ಮದಾ ಬಾದ್‌, ಮದ್ರಾಸ್‌ಗೆ ವಿಮಾನಯಾನ ಶುರುವಾಗಿತ್ತು. ಮೊದಲ ವರ್ಷದಲ್ಲಿ ವಿಮಾನ 2,60,000 ಕಿ.ಮೀ. ಗಳಷ್ಟು ಹಾರಾಟ ನಡೆಸಿದ್ದವು. 155 ಮಂದಿ ಪ್ರಯಾಣಿಕರನ್ನು, 9.72 ಟನ್‌ ಸರಕು ಸಾಗಣೆ ಮಾಡಿತ್ತು, ಆ ವೇಳೆಗೆ 60 ಸಾವಿರ ರೂ. ಲಾಭ ಮಾಡಿತ್ತು. 1938ರಲ್ಲಿ ಸಂಸ್ಥೆ ತನ್ನ ಹೆಸರನ್ನು ಬದಲಾಯಿ­ಸಿಕೊಂಡು “ಟಾಟಾ ಏರ್‌ಲೈನ್ಸ್‌’ ಎಂಬ ಹೊಸ ಹೆಸರನ್ನು ಪಡೆದುಕೊಂಡಿತು. ಕೊಲೊಂಬೋ ಮತ್ತು ಹೊಸದಿಲ್ಲಿಗೆ ವಿಮಾನಯಾನ ಶುರು ಮಾಡ ಲಾಯಿತು. ಎರಡನೇ ಪ್ರಪಂಚ ಮಹಾ ಯುದ್ಧದ ಬಳಿಕ ಸಂಸ್ಥೆ ಮತ್ತೆ ಕಾರ್ಯಾಚರಣೆಗೆ ಮುಂದಾಗಿತ್ತು. 1946 ಜು.29ರಂದು ಅದನ್ನು ಸಾರ್ವಜನಿಕ ಕಂಪೆನಿ ಎಂದು ಘೋಷಿಸಿ, ಏರ್‌ ಇಂಡಿಯಾ ಎಂದು ಹೆಸರು ಬದಲಾಯಿಸ ಲಾಯಿತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಏರ್‌ ಇಂಡಿಯಾದ ಶೇ.49 ಷೇರುಗಳನ್ನು ಭಾರತ ಸರಕಾರ ಖರೀದಿ ಮಾಡಿತು. 1948 ಜೂ.8ರಂದು ಮೊದಲ ಅಂತಾ­ರಾಷ್ಟ್ರೀಯ ವಿಮಾನಯಾನ ಬಾಂಬೆಯಿಂದ ಲಂಡನ್‌ಗೆ ತೆರಳಿತ್ತು. 1953ರಲ್ಲಿ ಕೇಂದ್ರ ಸರಕಾರ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿತು.

ಯಾವ ಸಂಸ್ಥೆಗಳ ಷೇರುಗಳ ಮಾರಾಟ?

ಏರ್‌ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇ.100 ಷೇರುಗಳು ಏರ್‌ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್‌ ಲಿಮಿಟೆಡ್‌ (ಎಐಎಚ್‌ಎಲ್‌)ನ ಶೇ.50 ಷೇರುಗಳು ಎಐಎಚ್‌ಎಲ್‌- ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಗೊ ಮತ್ತು ಗ್ರೌಂಡ್‌ ಹ್ಯಾಂಡ್ಲಿಂಗ್‌- ಅಂದರೆ ವಿಮಾನದ ನಿಲುಗಡೆ, ಹಾರಾಟಕ್ಕೆ ಮೊದಲು ಕೈಗೊಳ್ಳಲಾಗುವ ಸಿದ್ಧತೆಗಳನ್ನು ಪೂರೈಸುವ ವಿಭಾಗ.

ಟಾಟಾಗೆ ಏನು ಸಿಗಲಿದೆ?

45,000 ಕೋಟಿ ರೂ.- ಇಷ್ಟು ಮೌಲ್ಯದ ಏರ್‌ ಇಂಡಿಯಾದ ಸ್ಥಿರಾಸ್ತಿ
ಪ್ರಾದೇಶಿಕ ವಿಮಾನ ನಿಲ್ದಾಣಗಳ 4,400, 1,800 ಅಂತಾರಾಷ್ಟ್ರೀಯ ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ಸ್ಲಾಟ್‌ಗಳ ನಿಯಂತ್ರಣ
ವಿದೇಶಗಳಲ್ಲಿರುವ ವಿಮಾನ ನಿಲ್ದಾಣಗಳ ಸಂಸ್ಥೆಯ 900 ಸ್ಲಾಟ್‌ಗಳ ನಿಯಂತ್ರಣ

ಹಿನ್ನೋಟ

1932- ಜೆ.ಆರ್‌.ಡಿ.ಟಾಟಾ ಅವರಿಂದ ಸ್ಥಾಪನೆ.
1935- ಡೆ ಹೆವಿಲ್ಯಾಂಡ್‌ ಫಾಕ್ಸ್‌ ಮಾತ್‌ ಡಿಎಚ್‌-83 ವಿಮಾನ ಸೇರ್ಪಡೆ
1937- ತಿರುವನಂತಪುರ, ಹೊಸದಿಲ್ಲಿ, ಕೊಲೊಂಬೋ, ಲಾಹೋರ್‌ ಮತ್ತು ಇತರ ಸ್ಥಳಗಳಿಗೆ ವಿಮಾನ ವಿಸ್ತರಣೆ
1946- ಟಾಟಾ ಏರ್‌ಲೈನ್ಸ್‌ ಅನ್ನು ಸರಕಾರಿ ಸ್ವಾಮ್ಯದ ಕಂಪೆನಿಯಾಗಿ ಬದಲು. ಏರ್‌ ಇಂಡಿಯಾ ಲಿಮಿಟೆಡ್‌ ಎಂದು ಹೆಸರು ಬದಲು
1948- ಬಾಂಬೆಯಿಂದ ಕೈರೋ, ಜಿನೀವಾ,
ಲಂಡನ್‌ಗೆ ಸೇವೆ ಶುರು
1953- ಸಂಸ್ಥೆಯ ರಾಷ್ಟ್ರೀಕರಣ. ದೇಶೀಯ ವಿಮಾನ ಯಾನಕ್ಕಾಗಿ ಇಂಡಿಯನ್‌ ಏರ್‌ಲೈನ್ಸ್‌, ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಏರ್‌ ಇಂಡಿಯಾ ಇಂಟರ್‌ನ್ಯಾಶನಲ್‌ ಕಾರ್ಪೊರೇಶನ್‌ ಎಂಬ 2 ಸಂಸ್ಥೆಗಳ ರಚನೆ
1962- ಏರ್‌ ಇಂಡಿಯಾ ಇಂಟರ್‌ನ್ಯಾಶನಲ್‌ ಕಾರ್ಪೊರೇಶನ್‌ ಅನ್ನು ಏರ್‌ ಇಂಡಿಯಾ ಎಂದು ಬದಲು
2001- ವಾಜಪೇಯಿ ಸರಕಾರದಿಂದ ಮೊದಲ ಬಾರಿಗೆ ಶೇ.40ರಷ್ಟು ಷೇರು ಮಾರಾಟಕ್ಕೆ ಕ್ರಮ.
2007- ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ವಿಲೀನ
2018- ಕೇಂದ್ರ ಸರಕಾರದಿಂದ ಮತ್ತೆ ಷೇರು ಮಾರಾಟಕ್ಕೆ ಯತ್ನ. ಶೇ.24ರಷ್ಟು ಪಾಲು ಉಳಿಸಿಕೊಳ್ಳಲು ಮುಂದಾಗಿದ್ದ ಸರಕಾರ.
2020- ಈ ಬಾರಿ ಶೇ.100 ಷೇರುಗಳನ್ನು ಮಾರಾಟಕ್ಕೆ ಪ್ರಯತ್ನ. ಅಕ್ಟೋಬರ್‌ನಲ್ಲಿ ಬಿಡ್‌ ಸಲ್ಲಿಕೆಗೆ ಡಿ.14 ಅಂತಿಮ ದಿನಾಂಕ ಎಂದು ಘೋಷಣೆ. ಟಾಟಾ ಸನ್ಸ್‌, ಅಮೆರಿಕದ ಬಂಡವಾಳ ಹೂಡಿಕೆ ಸಂಸ್ಥೆ ಜತೆಗೂಡಿ ಏರ್‌ ಇಂಡಿಯಾ ಉದ್ಯೋಗಿಗಳ ಸಂಘ, ಸ್ಪೈಸ್‌ಜೆಟ್‌ ಪ್ರವರ್ತಕ ಅಜಯ್‌ ಸಿಂಗ್‌ರಿಂದ ಬಿಡ್‌ ಸಲ್ಲಿಕೆ.
2021 ಎಪ್ರಿಲ್‌- ಟಾಟಾ ಸನ್ಸ್‌ ಮತ್ತು ಸ್ಪೈಸ್‌ಜೆಟ್‌ನ ಅಜಯ್‌ ಸಿಂಗ್‌ ಅವರಿಗೆ ಅಂತಿಮ ಹಂತದ ಬಿಡ್‌ ಸಲ್ಲಿಸಲು ಸೂಚನೆ.

Advertisement

Udayavani is now on Telegram. Click here to join our channel and stay updated with the latest news.