ಕೋಲಾರ/ಚಿಕ್ಕಬಳ್ಳಾಪುರ: “ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಬಿಜೆಪಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಸಿಕ್ಕಿದ ಗೌರವ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸಿ, ಬಳಿಕ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದರು. ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ ಮಾತನಾಡಿ, “ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಬಿಜೆಪಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಏಕೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ರಾಜ್ಯ ಸರ್ಕಾರವನ್ನು ಹೊಗಳಿ ಮಾತನಾಡಿದ್ದಾರೆ. ಆ ಮೂಲಕ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂದರು.
ಮೋದಿ ಸರ್ಕಾರ ಸಾಲ ಮನ್ನಾ ಮಾಡಲಿಲ್ಲ: ಇದೇ ವೇಳೆ, ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಮೋದಿ ಕಚೇರಿಗೆ ಭೇಟಿ ನೀಡಿ, ಕರ್ನಾಟಕ, ಪಂಜಾಬ್ ಮತ್ತು ಉತ್ತರಪ್ರದೇಶ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಮನವಿ ಸಲ್ಲಿಸಿದ್ದೆ. ಆದರೆ, ಯಾವುದೇ ಉತ್ತರ ಸಿಕ್ಕಿಲ್ಲ. ಅದೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರನ್ನು ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ ಕೂಡಲೇ ರೈತರ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಪುನರುಚ್ಚರಿಸಿದರು.
ಅಮಿತ್ ಶಾ ವಿರುದ್ದದ ಕೊಲೆ ಪ್ರಕರಣ ನ್ಯಾಯಾಲಯದಲ್ಲಿದೆ. ಇದರಿಂದ ಹೊರ ಬರಲು ಸಾಧ್ಯವಾಗದೆ ಅವರು ಭೀತಿಯಲ್ಲಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿಯವರು ಅಮಿತ್ ಶಾ, ಯಡಿಯೂರಪ್ಪ ವಿರುದ್ಧ ಚಕಾರ ಎತ್ತಲ್ಲ. ಅವರಿಗೇನಾದರೂ ನೈತಿಕತೆ ಇದ್ದರೆ ಭಾಷಣದ ವೇದಿಕೆಯಿಂದ ಭ್ರಷ್ಟರನ್ನು ಕೆಳಗಿಳಿಸಲಿ. ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನಾಲ್ಕು ಮಂದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಾಲಯದ ಮುಂದೆ ಕೈಜೋಡಿಸಿ ನ್ಯಾಯಕ್ಕಾಗಿ ಅಂಗಲಾಚುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಮೋದಿಯವರು ಭ್ರಷ್ಟಾಚಾರ ಹಾಗೂ ಬ್ಯಾಂಕ್ ಲೂಟಿ ಹೊಡೆದವರ ಕುರಿತು ಪ್ರಶ್ನೆಗಳನ್ನು ಎದುರಿಸುವ ಧೈರ್ಯವಿಲ್ಲದೆ ಸಂಸತ್ ಅಧಿವೇಶನವನ್ನು ಹತ್ತು ದಿನಗಳ ಕಾಲ ಬಂದ್ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಮೋದಿಯವರು ಎಲ್ಲಾ ವಿಚಾರಗಳ ಕುರಿತು “ಮನ್‌ಕಿ ಬಾತ್’ ನಲ್ಲಿ ಮಾತನಾಡುತ್ತಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯುವ ಕುರಿತು ಭಾಷಣ ಬಿಗಿಯುತ್ತಾರೆ. ಪರೀಕ್ಷಾ ಒತ್ತಡ ನಿವಾರಣೆ ಕುರಿತು ಸಾಕಷ್ಟು ಮಾತನಾಡುತ್ತಾರೆ. ಆದರೆ, ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ, ವಿದ್ಯಾರ್ಥಿಗಳಲ್ಲಿ ಒತ್ತಡ ಉಂಟು ಮಾಡುತ್ತಾರೆ ಎಂದು ಲೇವಡಿ ಮಾಡಿದರು.