Advertisement

ಮೋದಿ ಹೆದರಿದಾಗ ವೈಯಕ್ತಿಕ ದಾಳಿ

06:00 AM May 04, 2018 | |

ಔರಾದ್‌(ಬೀದರ): “”ನರೇಂದ್ರ ಮೋದಿ ಹೆದರಿದಾಗ ಬೇರೆಯವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾರೆ. ಜನರಿಗಾಗಿ ಮಾಡಿದ ಕೆಲಸಗಳ ಕುರಿತು ಹೇಳದೆ, ನನ್ನ ಭಾಷಣದ ಬಗ್ಗೆ ಮಾತನಾಡುವ ಮೋದಿ ಅವರಿಗೆ ಒಬ್ಬ ಪ್ರಧಾನಿಯಾಗಿ ಶೋಭೆ ತರದು” ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದರು.

Advertisement

ಔರಾದ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, “”ನನ್ನ ಬಗ್ಗೆ ಅವಹೇಳನ ಮಾಡಲಿ ಮತ್ತು ಸರಿ, ತಪ್ಪುಗಳನ್ನು ಹೇಳಲಿ. ಆದರೆ, ನಾನು ಎಂದಿಗೂ ಅವರ ಮೇಲೆ ವೈಯಕ್ತಿಕ ದಾಳಿ ಮಾಡುವುದಿಲ್ಲ. ಮೋದಿ ನಮ್ಮ ದೇಶದ ಪ್ರಧಾನಿ. ಅವರ ಬಗ್ಗೆ ನಾನು ವೈಯಕ್ತಿಕ ದಾಳಿ ಮಾಡುವುದಿಲ್ಲ. ಆದರೆ, ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ನನ್ನ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಅವರು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ ಬಗ್ಗೆ ಹೇಳಿದರೆ ಆಗ ಅವರ ಭಾಷಣಕ್ಕೆ ಶೋಭೆ ಬರುತ್ತದೆ. ನನ್ನ ಬಗ್ಗೆ ಮಾತನಾಡಿದರೆ ನಿಮಗೆ ಯಾವುದೇ ಲಾಭ ಸಿಗದು” ಎಂದರು.

“”ಬಸವೇಶ್ವರ ಕರ್ನಾಟಕಕ್ಕೆ ಸನ್ಮಾರ್ಗ ತೋರಿಸಿಕೊಟ್ಟ ಮಹಾತ್ಮ. ಅವರನ್ನು ಸ್ಮರಿಸುವ ಪ್ರಧಾನಿ ಮೋದಿ, ಅವರ “ನುಡಿದಂತೆ ನಡೆ’ ತತ್ವ ಪಾಲಿಸುವುದಿಲ್ಲ. ಕರ್ನಾಟಕಕ್ಕೆ ಸಫಲತೆ ಸಿಕ್ಕಿದೆ ಎಂದರೆ ಇಲ್ಲಿಯ ಜನ ನುಡಿದಂತೆ ನಡೆಯುತ್ತಾರೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಇದು ಕಾಂಗ್ರೆಸ್‌ ಚಿಂತನೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ ಶೇ.90ರಷ್ಟು ಭರವಸೆಗಳನ್ನು ಈಡೇರಿಸಿದೆ” ಎಂದು ಹೇಳಿದರು.

“”ಕೈಗಾರಿಕೋದ್ಯಮಿಗಳ 2.5 ಲಕ್ಷ ರೂ. ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿಗೆ ರೈತರ ಸಾಲ ಮನ್ನಾ ಮಾಡುವಂತೆ ನಾನು ಮನವಿ ಮಾಡಿದಾಗ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಕೇವಲ 10 ದಿನದಲ್ಲಿ ಕರ್ನಾಟಕದ ರೈತರ 8,500 ಕೋಟಿ ರೂ. ಸಹಕಾರ ಬ್ಯಾಂಕಿನ ಸಾಲಮನ್ನಾ ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆ. ಅನ್ನದಾತರ ಬಗ್ಗೆ ಪ್ರಧಾನಿ ಮೋದಿ ಹೃದಯದಲ್ಲಿ ಜಾಗ ಇದ್ದಿದ್ದರೆ ಅವರು ಸಾಲ ಮನ್ನಾ ಮಾಡುತ್ತಿದ್ದರು” ಎಂದರು.

ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ವೇಣುಗೋಪಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪ್ರಮುಖರಾದ ಶೈಲಜನಾಥ, ಉಬೇದುಲ್ಲಾ ಶರೀಫ್‌ ಮತ್ತು ವಿಜಯಸಿಂಗ್‌ ಮತ್ತಿತರರು ಇದ್ದರು.

Advertisement

ರೆಡ್ಡಿ ಸೋದರರದ್ದು ಗಬ್ಬರ್‌ಸಿಂಗ್‌ ಗ್ಯಾಂಗ್‌
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಅವರು ರೆಡ್ಡಿ ಸಹೋದರರನ್ನು ಬಾಲಿವುಡ್‌ನ‌ ಶೋಲೆ ಚಿತ್ರದ ಗಬ್ಬರ್‌ಸಿಂಗ್‌ ಗ್ಯಾಂಗ್‌ಗೆ ಹೋಲಿಸಿದ್ದಾರೆ. ಔರಾದನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿದ್ದ ರೆಡ್ಡಿ ಬ್ರದರ್ಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಿಡಿಸಿಕೊಂಡು ರಾಜ್ಯದ ವಿಧಾನಸಭೆಗಳಿಗೆ ಕಳುಹಿಸುವ ಪ್ರಯತ್ನ ನಡೆಸಿದೆ. ಆ ಗ್ಯಾಂಗ್‌ನಲ್ಲಿ ಗಬ್ಬರ್‌, ಸಾಂಬಾ, ಕಾಲಿಯಾನಂಥವರು ಇದ್ದಾರೆ. ಗಬ್ಬರ್‌ಸಿಂಗ್‌ ಗ್ಯಾಂಗ್‌ನ್ನು ಕಣಕ್ಕಿಳಿಸುವ ಮೂಲಕ ಅವರನ್ನು ಮತ್ತೆ ಮುಂಚೂಣಿಗೆ ತರುವ ಪ್ರಯತ್ನ ಮಾಡಲಾಗಿದೆ. ಆದರೆ, ಪ್ರಧಾನಿ ಮೋದಿ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next