ಚೆನ್ನೈ: ದ್ರಾವಿಡ ನೇತಾರ ಅಣ್ಣಾದುರೈ ವಿರುದ್ಧ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ನೀಡಿದ ಹೇಳಿಕೆ ಮಿತ್ರಪಕ್ಷವಾದ ಎಐಎಡಿಎಂಕೆಯನ್ನು ಕೆರಳಿಸಿದೆ.
ಅಣ್ಣಾಮಲೈ ಮತ್ತು ಬಿಜೆಪಿ ನಾಯಕರ ವಿರುದ್ಧ ಎಐಎಡಿಎಂಕೆ ನಾಯಕರು ಮುಗಿಬಿದ್ದಿದ್ದು, ಸದ್ಯದ ಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸೆ. 11ರಂದು ರಾಜ್ಯದ ಧಾರ್ಮಿಕ ದತ್ತಿ ಸಚಿವ ಪಿ.ಕೆ.ಶೇಖರ ಬಾಬು ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, 1950ರ ದಶಕದಲ್ಲಿ ಅಣ್ಣಾದುರೈ ಅವರು ಕಾರ್ಯಕ್ರಮವೊಂದರಲ್ಲಿ ಹಿಂದೂ ನಂಬಿಕೆಯನ್ನು ಕಟುವಾಗಿ ಟೀಕಿಸಿದ್ದರು ಮತ್ತು ಅದನ್ನು ಸ್ವಾತಂತ್ರ್ಯ ಹೋರಾಟಗಾರ ಪಿ. ಮುತ್ತುಲಿಂಗ ತೇವರ್ ಬಲವಾಗಿ ವಿರೋಧಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಮಿತ್ರಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ದ್ರಾವಿಡ ನಾಯಕ ಅಣ್ಣಾದುರೈ ಅವರ ಬಗೆಗೆ ಬಿಜೆಪಿ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ದ್ರಾವಿಡ ನಾಯಕರ ಹೆಸರುಗಳನ್ನು ಪ್ರಸ್ತಾವಿಸಿ ಅಣ್ಣಾಮಲೈ ರಾಜಕೀಯವಾಗಿ ಮುನ್ನೆಲೆಗೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎಐಎಡಿಎಂಕೆ ನಾಯಕರು ಆರೋಪಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಘಟನಾವಳಿಗಳು ನಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.