ಹೊಸದಿಲ್ಲಿ: ಬೋರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಮೂರೇ ದಿನಗಳಲ್ಲಿ ಮುಗಿದ ಕಾರಣ ಅಹ್ಮದಾಬಾದ್ ಟ್ರ್ಯಾಕ್ ಹೇಗಿದ್ದೀತು ಎಂಬ ಕುತೂಹಲ ತೀವ್ರಗೊಂಡಿದೆ. ಆದರೆ ಇಲ್ಲಿನ ಪಿಚ್ ಅನ್ನು ನಿರ್ದಿಷ್ಟವಾಗಿ ಹೀಗೆಯೇ ನಿರ್ಮಿಸಬೇಕು ಎಂದು ಯಾರಿಂದಲೂ ಸೂಚನೆ ಬಂದಿಲ್ಲ ಎಂಬುದಾಗಿ ಬಿಸಿಸಿಐ ಕ್ಯುರೇಟರ್‌ಗಳಾದ ತಪೋಶ್ ಚಟರ್ಜಿ ಮತ್ತು ಆಶಿಷ್ ಭೌಮಿಕ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಇದು ದೇಶದ ಅತೀ ವೇಗದ ಏಕೈಕ ಟ್ರ್ಯಾಕ್ ಎಂದು ಹೆಸರುವಾಸಿಯಾಗಿತ್ತು. ಈಗಲೂ ಹಾಗೆಯೇ ಉಳಿದರೆ ಸರಣಿಯ ಈ ಪಂದ್ಯವಾದರೂ ಭಿನ್ನ ರೀತಿಯಲ್ಲಿ ಸಾಗಬಹುದು ಎಂಬ ನಿರೀಕ್ಷೆ ಇರಿಸಬಹುದು.
ಇಲ್ಲಿ ಜನವರಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ರೈಲ್ವೇಸ್ 508 ರನ್ ಪೇರಿಸಿತ್ತು. ಆದರೆ ಆತಿಥೇಯ ಗುಜರಾತ್ ಎರಡೂ ಇನ್ನಿಂಗ್ಸ್‌ಗಳಲ್ಲಿ 200 ಪ್ಲಸ್ ರನ್ ಮಾಡಿ ಇನ್ನಿಂಗ್ಸ್ ಸೋಲಿಗೆ ಸಿಲುಕಿತ್ತು. ಪಿಚ್ ಇದಕ್ಕಿಂತ ಭಿನ್ನವಾಗೇನೂ ಇರದು ಎಂಬುದಾಗಿ ಜಿಸಿಎ ಮೂಲವೊಂದು ತಿಳಿಸಿದೆ.
ಆದರೆ 2021ರಲ್ಲಿ ಇಲ್ಲಿನ ನವೀಕೃತ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಾದ ಟೆಸ್ಟ್ ಪಂದ್ಯ ಎರಡೇ ದಿನದಲ್ಲಿ ಮುಗಿದಿತ್ತು. ಇನ್ನೊಂದು ಟೆಸ್ಟ್ 3 ದಿನಗಳಾಚೆ ಕಾಲಿಟ್ಟಿರಲಿಲ್ಲ.
ಅಹ್ಮದಾಬಾದ್ ಟೆಸ್ಟ್ ಮಾ. 9ರಂದು ಆರಂಭವಾಗಲಿದೆ.