ಕೊಲೊಂಬೊ: ಶ್ರೀಲಂಕಾದ ಪ್ರಭಾವಿ ರಾಜಪಕ್ಷ ಕುಟುಂಬದ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ ಎಲ್ ಪಿಪಿ) ಸಂಸತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಪ್ರಧಾನಿ ಮಹಿಂದ ರಾಜಪಕ್ಷೆ ಮತ್ತೊಮ್ಮೆ ಅಧಿಕಾರ ಹಿಡಿದಿದ್ದಾರೆ.
ಕೋವಿಡ್ ವೈರಸ್ ಕಾರಣದಿಂದ ಎರಡು ಬಾರಿ ಮುಂದೂಡಲ್ಪಟ್ಟ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಲಂಕಾದ ಪ್ರಬಲ ವ್ಯಕ್ತಿ ಮಹಿಂದಾ ರಾಜಪಕ್ಸೆ ಭರ್ಜರಿ ಜಯ ದಾಖಲಿಸಿದ್ದರಿಂದ ರಾಜಕೀಯ ಪುನರಾಗಮನ ಮಾಡಿದ್ದಾರೆ.
ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸತ್ 225 ಸ್ಥಾನಗಳನ್ನು ಹೊಂದಿದ್ದು ರಾಜಪಕ್ಷೆಯವರ SLPP ಪಕ್ಷ 146 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ವಿರೋಧ ಪಕ್ಷವಾಗಿರುವ ಸಜಿತ್ ಪ್ರೇಮದಾಸ ಅವರ ಯುನೈಟೈಡ್ ನ್ಯಾಷನಲ್ ಪಾರ್ಟಿ ಕೇವಲ 53 ಸ್ಥಾನ ಪಡೆದಿದೆ. ತಮಿಳು ಪಕ್ಷಗಳು 16 ಹಾಗೂ ಎಡಪಕ್ಷಗಳ ಮೈತ್ರಿಕೂಟ 10 ಸ್ಥಾನಗಳನ್ನು ಪಡೆದಿವೆ ಎಂದು ಚುನಾವಣಾ ಅಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಎಸ್ ಎಲ್ ಪಿ ಪಿ ಸಂಪೂರ್ಣ ಮೇಲುಗೈ ಸಾಧಿಸಿದ್ದು, 22 ಚುನಾವಣಾ ಜಿಲ್ಲೆಗಳಲ್ಲಿ 4 ಹೊರತುಪಡಿಸಿ ಎಲ್ಲವನ್ನು ಗೆದ್ದಿದೆ. ಸುಮಾರು 1.5 ಕೋಟಿ ಮತದಾರರಲ್ಲಿ ರಾಜಪಕ್ಸೆ ಅವರ ಪಕ್ಷಕ್ಕೆ 60%ರಷ್ಟು ಮತ ಬಂದಿದೆ. ಯುಎಸ್ ಪಿ ಪಕ್ಷ ಶೇ 20 ರಷ್ಟು ಮತಗಳನ್ನು ಪಡೆದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ರಾಜಪಕ್ಸೆ ಅವರಿಗೆ ಅಭಿನಂದನೆ ತಿಳಿಸಿದ್ದು, ದ್ವಿಪಕ್ಷೀಯ ಸಹಕಾರದ ಎಲ್ಲಾ ಕ್ಷೇತ್ರಗಳನ್ನು ಮತ್ತಷ್ಟು ಮುನ್ನಡೆಸಲು ಮತ್ತು ಅವರ ಹೊಸ ಎತ್ತರಕ್ಕೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡುವಂತೆ ಅಭಿನಂದಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಕೂಡ ಇದು ಆಡಳಿತರೂಢ ಪಕ್ಷಕ್ಕೆ ಲಭಿಸಿದ ಗೆಲುವು ಎಂದು ಟ್ವೀಟ್ ಮಾಡಿದ್ದಾರೆ.