Advertisement

ಆಹಾ! ಉಪ್ಪಿನಕಾಯಿ

11:40 AM May 29, 2019 | mahesh |

ಗಂಜಿಯೂಟಕ್ಕೆ ಸವಿಯಲು ಉಪ್ಪಿನಕಾಯಿ ಇರಲೇಬೇಕು. ನಮ್ಮ ದಕ್ಷಿಣ ಕನ್ನಡದ ಕುಚ್ಚಲಕ್ಕಿ ಗಂಜಿಗೆ ಉಪ್ಪಿನಕಾಯಿ ಇದ್ದರೆ ಸವಿಯಲು ಬಲು ರುಚಿ.

Advertisement

ಕಣಿಲೆ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 2 ಕಪ್‌ ಕಣಿಲೆ ಹೋಳು, ನೆಲ್ಲಿಕಾಯಿ ಗಾತ್ರದ ಹುಳಿ, 3/4 ಚಮಚ ಅರಸಿನಪುಡಿ, 1 ಕಪ್‌ ಉಪ್ಪುನೀರು, 2 ಕಪ್‌ ಉಪ್ಪಿನಕಾಯಿ ಮೆಣಸು, 1/2 ಕಪ್‌ ಸಾಸಿವೆ, ಚಿಟಿಕೆ ಇಂಗು.

ತಯಾರಿಸುವ ವಿಧಾನ: ಎಳೆ ಕಣಿಲೆಯನ್ನು 1/2 ಅಂಗುಲ ಹೋಳುಗಳನ್ನಾಗಿ ಹೆಚ್ಚಿ ನೀರಲ್ಲಿ ಹಾಕಿಡಿ. ಮಾರನೆ ದಿನ ನೀರು ಬಸಿದು ತೊಳೆದು ಬೇರೆ 1/2 ಲೀಟರ್‌ ನೀರು ಹಾಕಿ ಚೆನ್ನಾಗಿ ಕುದಿಸಿ ನೀರು ಬಸಿದಿಡಿ. ನಂತರ ಕಣಿಲೆ ಹೋಳಿಗೆ ಹುಳಿ, 1 ಹಿಡಿ ಉಪ್ಪು, 2 ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ. ಹೋಳನ್ನು ಆರಿಸಿ ತೆಗೆಯಿರಿ. ಆರಲು ಬಿಡಿ. ಉಪ್ಪು ನೀರಲ್ಲಿ ಮೆಣಸು, ಸಾಸಿವೆ, ಇಂಗು, ಅರಸಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿ. ತಣಿದ ಹೋಳಿಗೆ ಬೆರೆಸಿ ಬಾಟಲಿಗೆ ತುಂಬಿಸಿ. 6 ತಿಂಗಳು ತನಕ ಕೆಡದೆ ಉಳಿಯುತ್ತದೆ.

ಮುಂಡಿಗಡ್ಡೆ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಮುಂಡಿಗಡ್ಡೆ , 1/4 ಕಪ್‌ ಉಪ್ಪು , 2 ಚಮಚ ಹುಳಿರಸ, 1/2 ಕಪ್‌ ಉಪ್ಪಿನಕಾಯಿ ಹುರಿದ ಹಿಟ್ಟು.

ತಯಾರಿಸುವ ವಿಧಾನ: ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಮುಂಡಿಗಡ್ಡೆ ಚೆನ್ನಾಗಿ ತೊಳೆದು, ಬೇಯಿಸಿ. ಉಪ್ಪು , ಹುಳಿರಸ ಹಾಕಿ ಕುದಿದ ನಂತರ ಇಳಿಸಿ. ಆರಿದ ನಂತರ ಉಪ್ಪಿನಕಾಯಿ ಹುರಿದ ಹಿಟ್ಟು ಬೆರೆಸಿ ಇಡಿ. ಕೂಡಲೇ ಉಪಯೋಗಿಸಬಹುದು. ಇದು 2-3 ದಿನಗಳಿಗೆ ಮಾತ್ರ ರುಚಿ.

Advertisement

ಬಾಳೆದಿಂಡು ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಣ್ಣಗೆ ಹೆಚ್ಚಿದ ಬಾಳೆದಿಂಡು, 1/2 ಕಪ್‌ ಉಪ್ಪಿನಕಾಯಿ ಹುರಿದ ಹಿಟ್ಟು ಯಾ ಹಸಿಹಿಟ್ಟು, 1/4 ಕಪ್‌ ಉಪ್ಪು , 1 ಚಮಚ ಹುಳಿರಸ.

ತಯಾರಿಸುವ ವಿಧಾನ: ಬಾಳೆದಿಂಡಿನ ಹೊರಗಿನ ಸಿಪ್ಪೆ ತೆಗೆದು, ಒಳಗಿನ ಮೃದು ಭಾಗವನ್ನು ಸಣ್ಣಗೆ ಹೆಚ್ಚಿ. ಬಾಳೆದಿಂಡಿಗೆ ಉಪ್ಪು, ಹುಳಿರಸ ಹಾಕಿ ಬೇಯಿಸಿ. ನಂತರ ಹುರಿದ ಯಾ ಹಸಿಹಿಟ್ಟು ಹಾಕಿ ಬೆರೆಸಿ. ಈಗ ಬಾಳೆದಿಂಡಿನ ಉಪ್ಪಿನಕಾಯಿ ಸವಿಯಲು ಸಿದ್ಧ. ಪ್ರಿಜ್‌ನಲ್ಲಿಟ್ಟರೆ ಒಂದು ವಾರ ಬಾಳಿಕೆ ಬರುತ್ತದೆ.

ಉಪ್ಪಿನಕಾಯಿ ಹಸಿಹಿಟ್ಟು
ಬೇಕಾಗುವ ಸಾಮಗ್ರಿ: 2 ಕಪ್‌ ಕೆಂಪುಮೆಣಸಿನಕಾಯಿ (ಒಣಮೆಣಸು), 1 ಕಪ್‌ ಸಾಸಿವೆ, 1/3 ಕಪ್‌ ಅರಸಿನ, ಒಂದೂವರೆ ಕಪ್‌ ಉಪ್ಪು .

ತಯಾರಿಸುವ ವಿಧಾನ: ಸಾಸಿವೆಯನ್ನು ಶುದ್ಧೀಕರಿಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒಣಮೆಣಸನ್ನು ಒಣಗಿಸಿ. 1 ಪಾತ್ರೆಗೆ ಉಪ್ಪು ಹಾಕಿ 1 ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ. ಉಪ್ಪು ಕರಗಿ, ಮತ್ತೆ ಕೆನೆಯಾಗಿ ಗಟ್ಟಿಯಾಗುತ್ತಾ ಬರುವವರೆಗೆ ಕುದಿಸಿ. ಮೆಣಸು ಮತ್ತು ಸಾಸಿವೆಗೆ ಉಪ್ಪು ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಅರಸಿನ ಪುಡಿ ಬೆರೆಸಿ. ಬಾಟಲಿಯಲ್ಲಿ ತುಂಬಿಸಿ ಭದ್ರವಾಗಿ ಮುಚ್ಚಿಡಿ. ಬೇಕಾದಾಗ ಮಾವು, ಕಣಿಲೆ, ನೆಲ್ಲಿಕಾಯಿ, ಅಂಬಟೆ, ಬಾಳೆದಂಡು, ಮುಂಡಿಗಡ್ಡೆ ಇತ್ಯಾದಿಗಳೊಂದಿಗೆ ಸೇರಿಸಿ ಉಪ್ಪಿನಕಾಯಿ ಮಾಡಬಹುದು. ನೀರು ತಾಗದಂತೆ ಜಾಗ್ರತೆ ವಹಿಸುವುದು ಬಹಳ ಮುಖ್ಯ.

ಉಪ್ಪಿನಕಾಯಿ ಹುರಿದ ಹಿಟ್ಟು
ಬೇಕಾಗುವ ಸಾಮಗ್ರಿ: 2 ಕಪ್‌ ಒಣಮೆಣಸು, 1/2 ಕಪ್‌ ಸಾಸಿವೆ, 4 ಚಮಚ ಅರಸಿನ, 2 ಚಮಚ ಮೆಂತೆ, ಚಿಟಿಕೆ ಇಂಗು, 4 ಚಮಚ ಎಣ್ಣೆ.

ತಯಾರಿಸುವ ವಿಧಾನ: ಒಂದು ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಿ. ಸಾಸಿವೆ, ಮೆಣಸು, ಮೆಂತೆ ಹಾಕಿ ಸ್ವಲ್ಪ ಹುರಿಯಿರಿ. ಚಟಪಟ ಸಿಡಿಯಲು ಪ್ರಾರಂಭವಾದಾಗ, ಅರಸಿನ, ಇಂಗು ಹಾಕಿ ಕೆಳಗಿಳಿಸಿ. ನಂತರ ಎಲ್ಲವನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಆರಿದ ಮೇಲೆ ಬಾಟಲಿಗೆ ತುಂಬಿಸಿ ಇಡಿ. ಯಾವುದೇ ಉಪ್ಪಿನಕಾಯಿಗೆ ಈ ಹುರಿದ ಪುಡಿ ಸೇರಿಸಬಹುದು.

ನುಗ್ಗೆಕಾಯಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಉಪ್ಪು ಹಾಕಿ ಬೇಯಿಸಿದ ನುಗ್ಗೆಕಾಯಿ, 1 ಕಪ್‌ ಒಣಮೆಣಸು, 1/4 ಕಪ್‌ ಸಾಸಿವೆ, 1 ಚಮಚ ಮೆಂತೆ, 1/2 ಚಮಚ ಜೀರಿಗೆ, 1/4 ಕಪ್‌ ಉಪ್ಪು , 3-4 ಚಮಚ ಎಣ್ಣೆ , 1/2 ಚಮಚ ಹುಳಿರಸ.

ತಯಾರಿಸುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಕೆಂಪು ಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಕೆಳಗಿಳಿಸಿ. ನಂತರ ಸಾಸಿವೆ, ಮೆಂತೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬೇಯಿಸಿದ ನುಗ್ಗೆಕಾಯಿಗೆ ಮಾಡಿಟ್ಟ ಪುಡಿ, ಉಪ್ಪು ನೀರು ಸ್ವಲ್ಪ ಹಾಕಿ ಸರಿಯಾಗಿ ಬೆರೆಸಿ. ನಂತರ ಸ್ವಲ್ಪ ಉಪ್ಪು ಹಾಕಿ ಬೆರೆಸಿ. ಈಗ ರುಚಿಯಾದ ನುಗ್ಗೆಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ. ಪ್ರಿಜ್‌ನಲ್ಲಿಟ್ಟರೆ 10 ದಿನ ಬಳಸಬಹುದು.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next