Advertisement

ಅನ್ನದಾತರ ಕೃಷಿಗೆ ಕೇಂದ್ರ ಸಿಂಚಾಯಿ

05:41 PM Jan 22, 2022 | Team Udayavani |

ಬೆಳಗಾವಿ: ಹರ್‌ ಖೇತ್‌ ಕೋ ಪಾನಿ (ಪ್ರತಿ ಹೊಲಕ್ಕೆ ನೀರು) ಸಂದೇಶದ ಕೃಷಿ ಸಿಂಚಾಯಿ ರೈತರಿಗೆ ನೆರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ದೂರದೃಷ್ಟಿಯೊಂದಿಗೆ ವ್ಯವಸ್ಥಿತ ನೀರಾವರಿ ಯೋಜನೆ ಸಿದ್ಧಪಡಿಸಿ ಕ್ಷೇತ್ರ ವಿಸ್ತರಿಸುವುದು ಹಾಗೂ ಅದಕ್ಕೆ ಸರಿಯಾದ ರೀತಿಯಲ್ಲಿ ಅನುದಾನ ಬಳಸಿ ಎಲ್ಲ ಹೊಲಗಳಿಗೂ ನೀರು ಕೊಡುವುದು ಇದರ ಮುಖ್ಯ ಉದ್ದೇಶ.

Advertisement

ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಪಡೆಯುವ ಎಲ್ಲ ಜಿಲ್ಲೆಗಳು ಕಡ್ಡಾಯವಾಗಿ ಐದು ವರ್ಷಗಳ ನೀರಾವರಿ ಯೋಜನೆಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಬಿಡುಗಡೆಯಾಗುವ ಅನುದಾನ ಬಳಸಬೇಕು. ಕೇಂದ್ರದ ನಿರ್ದೇಶನದಂತೆ ಕೃಷಿ ಸಿಂಚಾಯಿ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಐದು ವರ್ಷಗಳ ನೀರಾವರಿ ಯೋಜನೆ ಸಿದ್ಧಪಡಿಸಲಾಗಿದೆ.

ಒಟ್ಟು 12262 ಕೋಟಿ ರೂ. ಕ್ರಿಯಾಯೋಜನೆಯಲ್ಲಿ ಬೃಹತ್‌ ನೀರಾವರಿ, ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ, ಅರಣ್ಯ, ಜಲಮಂಡಳಿ ಇಲಾಖೆಗಳಿಂದ ಕೈಗೊಳ್ಳಲಾಗುವ ಯೋಜನೆಗಳ ವಿವರ ಇದರಲ್ಲಿ ಅಳವಡಿಸಲಾಗಿದೆ. ಒಟ್ಟು ಕ್ರಿಯಾ ಯೋಜನೆಯಲ್ಲಿ ಬೃಹತ್‌ ನೀರಾವರಿ ಇಲಾಖೆಗೆ 9800 ಕೋಟಿ ರೂ. ನಿಗದಿಪಡಿಸಲಾಗಿದ್ದರೆ, ಕೃಷಿ ಇಲಾಖೆಗೆ 825 ಹಾಗೂ ಸಣ್ಣ ನೀರಾವರಿ ಇಲಾಖೆಗೆ 468 ಕೋಟಿ ರೂ. ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಐದು ವರ್ಷಗಳ ಜಿಲ್ಲಾ ನೀರಾವರಿ ಯೋಜನೆಗಳ ಕ್ರಿಯಾ ಯೋಜನೆ ಈಗ ಕಡ್ಡಾಯ. ಜಿಲ್ಲಾಮಟ್ಟದಲ್ಲಿ ಸಿದ್ದಪಡಿಸುವ ಕ್ರಿಯಾಯೋಜನೆ ಒಳಗೊಂಡು ರಾಜ್ಯದಿಂದ ಸಲ್ಲಿಕೆಯಾಗುವ ಸಮಗ್ರ ಕ್ರಿಯಾ ಯೋಜನೆಗೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಆಯಾ ಜಿಲ್ಲೆಗಳ ನೀರಾವರಿ ಯೋಜನೆ ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಕಾಲುವೆಗಳ ದುರಸ್ತಿ, ಆಧುನೀಕರಣ, ಅಂತರ್ಜಲ ಅಭಿವೃದ್ಧಿ, ಕೃಷಿ ಹೊಂಡಗಳ ನಿರ್ಮಾಣ, ಚೆಕ್‌ ಡ್ಯಾಂ, ಕೆರೆಗಳ ಪುನಶ್ಚೇತನ, ಹೊಸ ಕೆರೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಅವಕಾಶ ಇದೆ. ಇದನ್ನು ಬೃಹತ್‌ ನೀರಾವರಿ, ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ.

Advertisement

642.26 ಕೋಟಿ ರೂ. ಮಂಜೂರು: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 642.26 ಕೋಟಿ ರೂ. ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳಿಗಿಂತ ದೊಡ್ಡ ಪ್ರಮಾಣದ ಅನುದಾನವಾಗಿದೆ. ನೈಸರ್ಗಿಕವಾಗಿ ಸಿಕ್ಕ ಅಮೂಲ್ಯವಾದ ನೀರಿನ ಉಪಯೋಗ ಸರಿಯಾಗಿ ಮಾಡಿಕೊಳ್ಳಬೇಕು ಮತ್ತು ಅಂತರ್ಜಲ ಹೆಚ್ಚಿಸುವ ದೃಷ್ಟಿಯಿಂದ ರೈತ ಸಮುದಾಯ ಪ್ರಯತ್ನ ಮಾಡಬೇಕು ಎಂಬುದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯ. ನೀರು ಹೆಚ್ಚುವರಿಯಾಗಿ ಉಪಯೋಗವಾಗಿ ಹಾನಿಯಾಗಬಾರದು ಮತ್ತು ಹೆಚ್ಚು ನೀರು ಬಳಸುವುದರಿಂದ ಉತ್ಪಾದನೆಗೆ ಹೊಡೆತ ಆಗುತ್ತದೆ.

ಜಮೀನು ಸವಳು-ಜವಳು ಆಗುತ್ತವೆ. ಇವೆಲ್ಲವನ್ನು ಮನಗಂಡು ಕಡಿಮೆ ನೀರಿನೊಳಗೆ ಹೆಚ್ಚು ಬೆಳೆ ತೆಗೆಯುವುದಕ್ಕೆ ಆದ್ಯತೆ ಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಯೋಜನೆ ಮಾಡಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲೆಗೆ 712.93 ಲಕ್ಷ ರೂ. ಗುರಿ ನಿಗದಿ ಮಾಡಲಾಗಿದ್ದು, 2021-22ನೇ ಸಾಲಿನಲ್ಲಿ 126.93 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ 127.99 ಲಕ್ಷ ರೂ. ವೆಚ್ಚದಲ್ಲಿ ಚೆಕ್‌ ಡ್ಯಾಂ, ನಾಲಾಬದುಗಳನ್ನು ನಿರ್ಮಾಣ ಮಾಡಲಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ. ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಸಿಂಚಾಯಿ ಬಹಳ ಅನುಕೂಲವಾಗಿದೆ. ಆದರೆ ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು.

ರೈತರನ್ನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಂಡು ಅವರಿಗೆ ಸಹಾಯಧನ ಬಿಡುಗಡೆ ಮಾಡಬೇಕು. ಯೋಜನೆ ಬಗ್ಗೆ ಸಮರ್ಪಕವಾದ ತಿಳಿವಳಿಕೆ ನೀಡಬೇಕು ಎನ್ನುತ್ತಾರೆ ರೈತ ಮುಖಂಡರು.

ಇದು ಬಹಳ ದೂರದೃಷ್ಟಿ ಇಟ್ಟುಕೊಂಡು ಮಾಡಿರುವ ಯೋಜನೆ. ನೀರಾವರಿ ಕ್ಷೇತ್ರದ ವಿಸ್ತರಣೆಯಾಗಬೇಕು. ಪ್ರತಿ ಹೊಲಕ್ಕೂ ನೀರು ಸಿಗಬೇಕು ಹಾಗೂ ನೀರಿನ ಸದ್ಬಳಕೆಯಾಗಬೇಕು ಎಂಬ ಕೇಂದ್ರದ ಯೋಜನೆ ಸಾಕಷ್ಟು ಒಳ್ಳೆಯ ಪರಿಣಾಮ ಬೀರಿದೆ. ಕೇಂದ್ರದಿಂದ ಬರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳುವ ಇಚ್ಛಾಶಕ್ತಿ ಪ್ರತಿಯೊಬ್ಬರಿಗೂ ಬರಬೇಕು.
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ಅಂತರ್ಜಲಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಕೃಷಿ ಸಿಂಚಾಯಿ ಬಹಳ ಒಳ್ಳೆಯ ಯೋಜನೆ. ಆದರೆ ಇದರ ದುರುಪಯೋಗವಾಗಬಾರದು. ಇಲ್ಲಿ ಚೆಕ್‌ ಡ್ಯಾಂ, ನಾಲಾ ಬಂದಿ, ಕೃಷಿ ಹೊಂಡಗಳ ನಿರ್ಮಾಣ ನೇರವಾಗಿ ರೈತರಿಗೆ ಕೊಡುವುದಿಲ್ಲ. ಇಲಾಖೆ ಅಥವಾ ಗುತ್ತಿಗೆದಾರರ ಮೂಲಕ ಮಾಡಲಾಗುತ್ತಿದೆ. ಇದರಿಂದ ಕಳಪೆ ಗುಣಮಟ್ಟದ ಕಾಮಗಾರಿ ನಡೆಯುವ ಸಾಧ್ಯತೆ ಹೆಚ್ಚು. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು.
ಮಲ್ಲಿಕಾರ್ಜುನ ರಾಮದುರ್ಗ, ರೈತ ಮುಖಂಡ

ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಸಿಂಚಾಯಿ ಯೋಜನೆ ಯಶಸ್ವಿ ಪರಿಣಾಮ ಬೀರಿದೆ. ಈ ಯೋಜನೆ ಅನುಷ್ಠಾನ ಆದಾಗಿನಿಂದ ಅದರ ಲಾಭ ಪಡೆದುಕೊಂಡಿರುವ ರೈತರು ವರ್ಷಕ್ಕೆ ಒಂದು ಬೆಳೆ ತೆಗೆಯುವಲ್ಲಿ ಈಗ ಎರಡು ಬೆಳೆ ತೆಗೆಯುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಎಲ್ಲ ರೈತರಿಗೆ ಇದರ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ.
ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ
ನಿರ್ದೇಶಕರು, ಬೆಳಗಾವಿ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next