Advertisement

ವೇದವ್ಯಾಸರ ಹೆಸರಿನಲ್ಲಿ ವಿವಿ ಸ್ಥಾಪನೆಯಾಗಲಿ: ವಿದ್ಯೇಶತೀರ್ಥ ಶ್ರೀ

09:30 AM Mar 08, 2019 | |

ಸಾಗರ: ವಿಶ್ವಕ್ಕೆ ಧಾರ್ಮಿಕ ಸಂಗತಿಯಲ್ಲಿ ಹೊಸ ಬೆಳಕು, ಹೊಳಹು ನೀಡಿ ಮಹಾಭಾರತವನ್ನು ರಚಿಸಿಕೊಟ್ಟ ವಿಶ್ವಗುರು ವೇದವ್ಯಾಸರ ಹೆಸರಿನಲ್ಲಿ ಭಾರತದಲ್ಲಿ ಒಂದೂ ವಿಶ್ವವಿದ್ಯಾಲಯವಿಲ್ಲ. ಈಗಲಾದರೂ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿತವಾಗಲಿ ಎಂದು ಉಡುಪಿಯ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳು ಹೇಳಿದರು.

Advertisement

ನಗರದಲ್ಲಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಂಚಾರದಲ್ಲಿರುವ ಶ್ರೀಗಳು ಗುರುವಾರ ಭಕ್ತರನ್ನುದ್ದೇಶಿಸಿ ಮಾತನಾಡಿದರು. ನಿರಂತರವಾಗಿ ಜ್ಞಾನಸತ್ರಗಳು ನಡೆಯಬೇಕು. ಭಾಗವತವನ್ನು ತಿಳಿದುಕೊಳ್ಳುವ ಮನಸ್ಥಿತಿ ಎಲ್ಲರಲ್ಲಿಯೂ ಬೆಳೆಯಬೇಕು. 

ಅಂತರಂಗದ ಶುದ್ಧಿಯಾಗದೆ ಜ್ಞಾನದ ಹಾಲು ಒಳಗಿಟ್ಟುಕೊಂಡರೆ ಏನೂ ಪ್ರಯೋಜನವಿಲ್ಲ. ಹಾಗೆಯೇ ಭಕ್ತಿಯಿಲ್ಲದ ಭಗವಂತನ ಪ್ರಾರ್ಥನೆ ಎಷ್ಟು ಸಾರಿ ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು. ಈ ವಿಚಾರದಲ್ಲಿ ಯೋಚನೆ ಮಾಡುವ ಪ್ರಶ್ನೆ ಇಲ್ಲ. ಇದು ಅಖಂಡ ಭಾರತದ ಸನಾತನ ಧರ್ಮದ ಪ್ರತೀಕ. ರಾಮಾಯಣ ಮತ್ತು ಮಹಾಭಾರತ ಪ್ರಪಂಚಕ್ಕೆ ನೀಡಿದ ಜ್ಞಾನದ ಕೊಡುಗೆ ಶ್ರೇಷ್ಠಮಟ್ಟದ್ದು ಎಂದರು.

ಭಕ್ತಿಯಿಂದ ಮುಕ್ತಿ ಕಾಣಬೇಕು. ಮನಃ ಶುದ್ಧಿಗೆ ಭಾಗವತದ ಮೊರೆ ಹೋಗಬೇಕು. ದೇವರ ಸಾಕ್ಷತ್ಕಾರವಾಗಬೇಕಾದರೆ ನಿರ್ಮಲವಾದ ಭಕ್ತಿ ಮುಖ್ಯ. ಗೊತ್ತಿಲ್ಲದೆ ಇರುವ ವಿಚಾರವನ್ನು ಇನ್ನೊಬ್ಬರಲ್ಲಿ ತಿಳಿದುಕೊಳ್ಳಬೇಕು ಎನ್ನುವ ಮನೋಚಿಂತನೆ ನಮ್ಮದಾಗಬೇಕು. ಇಲ್ಲವಾದರೆ ಅದು ಅಹಂಕಾರವಾಗಿಬಿಡುತ್ತದೆ. ಕೃಷ್ಣ ಅಂತರಂಗದ ಶುದ್ಧಿ, ಜ್ಞಾನದ ಅರಿವು, ಭಕ್ತಿಯಿಂದ ಮುಕ್ತಿ ಕಾಣುವುದು ಎಲ್ಲವನ್ನೂ ನಮಗೆ ಪರಿಚಯಿಸಿದ್ದಾನೆ ಎಂದರು.

Advertisement

ಭೂಮಿಯಲ್ಲಿ ಆನಂದದ ಅರಿವಾಗಬೇಕಾದರೆ ಆಧ್ಯಾತ್ಮದ ಅನುಸಂಧಾನವಾಗಬೇಕು. ಸ್ವಾರ್ಥದ ಮೂಸೆಯಿಂದ ಹೊರಬಂದು ಸಂಸ್ಕಾರಯುತರಾಗಿ ಜೀವನವನ್ನು ಭಕ್ತಿಮಾರ್ಗದೆಡೆಗೆ ತಿರುಗಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಬದುಕಿನಲ್ಲಿ ಎಲ್ಲವನ್ನೂ ಗಳಿಸುತ್ತೇವೆ. ಮುಂದೇನು ಎಂದರೆ ಯಾರಲ್ಲೂ ಉತ್ತರವಿಲ್ಲ. ಉತ್ತರದಾಯತ್ವವಿರುವುದು ಮುಕ್ತಿಯಲ್ಲಿ ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ಭಗವಂತನನ್ನು ನೆನೆಯುವ ಚಿಂತನೆ ಮಾಡಬೇಕು ಎಂದರು.

ರಘುನಂದನ ಪುರೋಹಿತ್‌ ದಂಪತಿ ಶ್ರೀಗಳಿಗೆ ಗೌರವ ಸಮರ್ಪಿಸಿದರು. ಮಾಧ್ವ ಸಂಘದ ಅಧ್ಯಕ್ಷ ಡಾ| ಗುರುರಾಜ ಕಲ್ಲಾಪುರ, ಕಾರ್ಯದರ್ಶಿ ಅನಂತರಾವ್‌, ಶ್ರೀಶಾಚಾರ್‌, ವೈ. ಮೋಹನ್‌, ಆನಂದ ಕಲ್ಯಾಣಿ, ರೇವತಿ ಹತ್ವಾರ್‌, ರಮಾದೇವಿ, ಮಂಜುಳಾ, ಭಾರತಿಬಾಯಿ, ಸುಮಿತ್ರಾಬಾಯಿ, ಲಕ್ಷ್ಮೀ, ಸುಮ, ಭಾಗ್ಯಲಕ್ಷ್ಮೀ, ಕೆ.ಬಿ. ಕಲಘಟಗಿ, ವೆಂಕಟೇಶ ಕಟ್ಟಿ, ರಾಘವೇಂದ್ರ, ವಾದಿರಾಜ, ನಿರ್ಮಲ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next