Advertisement

ಅನ್ನದಾತರ ಬತ್ತಳಿಕೆಗೆ ಅಸ್ತ್ರಗಳ ಬಲ!

02:40 PM Sep 20, 2022 | Team Udayavani |

ಧಾರವಾಡ: ಕಾಳುಮೆಣಸಿನ ಅಸ್ತ್ರ, ನೀಮಾಸ್ತ್ರ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರಗಳು ಕೃಷಿ ಮೇಳದಲ್ಲಿ ರೈತರ ಬತ್ತಳಿಕೆ ಸೇರುತ್ತಿವೆ. ಕೀಟ-ರೋಗ ನಿರ್ವಹಣೆಗಾಗಿ “ಕೃಷಿ ವಿವಿ’ ನಿರ್ಮಿತ, ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲ್ಪಟ್ಟ ಕೀಟ ಹಾಗೂ ರೋಗನಾಶಕ ಅಸ್ತ್ರಗಳು ಬಲ ತುಂಬುತ್ತಿವೆ!

Advertisement

ಹೌದು, ಕೃಷಿ ಮೇಳದಲ್ಲಿ ರೈತಾಪಿ ವರ್ಗದ ಜನ ಯಾವ ಅಸ್ತ್ರಗಳಿವು ಎಂಬ ಕುತೂಹಲದಿಂದಲೇ ಇತ್ತ ಕಣ್ಣಾಡಿಸುತ್ತಿದ್ದು, ಈ ಅಸ್ತ್ರಗಳ ತಯಾರಿಕೆ, ಲಾಭದ ಬಗ್ಗೆ ಕೇಳಿ ಮತ್ತಷ್ಟು ಖುಷಿ ಆಗುತ್ತಿದ್ದಾರೆ. ದುಬಾರಿ ಬೆಲೆ ತೆತ್ತು ಕೀಟನಾಶಕ ಹೊಡೆದರೂ ಕೀಟ-ರೋಗ ಬಾಧೆ ಹತೋಟಿಗೆ ಬರದ ಸನ್ನಿವೇಶದಲ್ಲಿ ಈ ಅಸ್ತ್ರಗಳು ಹೆಚ್ಚು ಗಮನ ಸೆಳೆದಿವೆ.

ಸಗಣಿ, ನೀರು, ಬೇವಿನ ಎಲೆ, ಗೋಮೂತ್ರದಿಂದ ಎಲ್ಲ ಬಗೆಯ ರಸಹೀರುವ ಕೀಟಗಳನ್ನು ನಿಯಂತ್ರಿಸುವ ನೀಮಾಸ್ತ್ರ; ಆಕಳ ಗಂಜಲು, ಬೇವಿನ ಎಲೆ, ಹಸಿಮೆಣಸಿನಕಾಯಿ, ಜವಾರಿ ಬಳ್ಳೊಳ್ಳಿ, ತಂಬಾನಿಂದ ಮಾಡಿದ ಅಗ್ನಿಅಸ್ತ್ರ; ಬೇವು, ಹೊಂಗೆ ಎಲೆ, ಯಕ್ಕಿ ಎಲೆ, ಬಿಳಿ ಲಕ್ಕಿ, ಸೀತಾಫಲ ಎಲೆಯಿಂದ ಎಲ್ಲ ಬಗೆಯ ಎಲೆ ತಿನ್ನುವ ಕೀಟಗಳನ್ನು ನಿಯಂತ್ರಿಸಬಹುದಾದ ಬ್ರಹ್ಮಾಸ್ತ್ರ ಸಿದ್ಧಪಡಿಸಬಹುದಾಗಿದೆ.

ಈ ಮೂರೂ ಅಸ್ತ್ರಗಳಿಗೆ ಪರ್ಯಾಯವಾಗಿ ಎಲ್ಲ ಬಗೆಯ ಎಲೆ ತಿನ್ನುವ, ಕಾಯಿ ಮತ್ತು ಕಾಂಡ ಕೊರಕ ಕೀಟಗಳ ನಿಯಂತ್ರಣಕ್ಕಾಗಿ ಬೇವು, ಹೊಂಗೆ ಎಲೆ, ಯಕ್ಕಿ ಎಲೆ, ಬಿಳಿ ಲಕ್ಕಿ, ಸೀತಾಫಲ ಎಲೆ, ಲಂಟಾನ ಎಲೆ, ಪೇರಲ ಎಲೆ, ಔಡಲ ಎಲೆ, ದತ್ತೂರಿ ಎಲೆ, ಮಾವು, ಗಂಜಲ, ಬಳ್ಳೊಳ್ಳಿ, ತಂಬಾಕು, ಹಸಿ ಮಣಸಿನಕಾಯಿ, ಶುಂಠಿ ಪುಡಿಯಿಂದ “ದಶಪರ್ಣಿ’ ಎಂಬ ಕೀಟನಾಶಕವನ್ನೂ ತಯಾರಿಸಬಹುದಾಗಿದೆ.

ಇದಲ್ಲದೇ ದೇಸಿ ಆಕಳ ಹಾಲು, ಒಣಶುಂಠಿ ಪುಡಿಯಿಂದ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾ ನಾಶ ಮಾಡುವ ಶುಂಠಿಅಸ್ತ್ರ ಅಥವಾ ಕಾಳು ಮೆಣಸಿನ ಅಸ್ತ್ರ ಸಿದ್ಧಪಡಿಸಬಹುದು. ಇನ್ನು ಹುಳಿಮಜ್ಜಿಗೆಯಿಂದ ವಿವಿಧ ಬಗೆಯ ಬೆಳೆಗಳ ಶೀಲಿಂದ್ರ ಹಾಗೂ ಬ್ಯಾಕ್ಟೀರಿಯಾ ರೋಗಗಳನ್ನು ಸಹ ನಿಯಂತ್ರಿಬಹುದು.

Advertisement

ರೈತರ ಸೆಳೆತ: ರಾಸಾಯನಿಕ ಮುಕ್ತವಾಗಿ ಕೀಟ-ರೋಗ ಬಾಧೆ ನಿಯಂತ್ರಣಕ್ಕಾಗಿ ನಾನಾ ಬಗೆಯ ಅಸ್ತ್ರಗಳ ಮಾದರಿ, ಅವುಗಳ ತಯಾರಿಕೆ, ಬಳಕೆ ಮಾಡುವ ವಿಧಾನಗಳ ಬಗ್ಗೆ ಸಾಕಷ್ಟು ರೈತರು ಮಾಹಿತಿ ಪಡೆಯುತ್ತಿದ್ದಾರೆ. ಇದಲ್ಲದೇ ಬೆಳೆವರ್ಧಕ, ರೋಗಬಾಧೆ ನಿಯಂತ್ರಿಸಬಹುದಾದ ಸಪ್ತಧಾನ್ಯ ಕಷಾಯ, ಜೀವಾಮೃತ, ಘನ ಜೀವಾಮೃತ, ಬೀಜಾಮೃತ, ಕಾಕುಳ್ಳಿನ ಅಥವಾ ಘನಬೀಜಾಮೃತದ ಕಷಾಯಗಳ ಮಾದರಿಗಳೂ ಗಮನ ಸೆಳೆದಿವೆ. ನೈಸರ್ಗಿಕ ಕೃಷಿಯ ಬದಲಾವಣೆಗೆ ರೈತರು ಎಷ್ಟು ಬೇಗ ಹೊಂದಿಕೊಳ್ಳುವರೋ ಅಷ್ಟೇ ಲಾಭ ಗಳಿಸಲಿದ್ದಾರೆ ಎಂಬ ಮಾಹಿತಿ ಕೃಷಿ ಮೇಳದಲ್ಲಿ ನೀಡಲಾಗುತ್ತಿದೆ. ನೈಸರ್ಗಿಕ ಕೃಷಿ ಕ್ರಮಗಳ ಸಮಗ್ರ ಮಾಹಿತಿ ಇಲ್ಲಿದೆ.

ನೈಸರ್ಗಿಕ ಪರಿಕರ ಬಳಕೆಯಿಂದ ಕಾಳಿನ ತೂಕ, ಹೊಳಪು ಹೆಚ್ಚಾಗುತ್ತದೆ. ಮಣ್ಣಿನ ಸವಕಳಿ ತಡೆ, ನೀರು ಸಂರಕ್ಷಣೆ, ಹೆಚ್ಚು ಇಳುವರಿ, ರೋಗಗಳ ನಿಯಂತ್ರಣ, ಕಳೆ ನಿಯಂತ್ರಣ ಹೀಗೆ ಹತ್ತಾರು ಉಪಯೋಗಗಳಿವೆ. ನಿಸರ್ಗದತ ಸಾಮಗ್ರಿಗಳಿಂದ ತಯಾರಿಸಿದ ಔಷಧಗಳನ್ನು ಸಿಂಪಡಣೆ ಮಾಡಿ ಹೆಚ್ಚಿನ ಇಳುವರಿ ಪಡೆಯುವ ಮೂಲಕ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ. ಹೀಗಾಗಿ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಇವುಗಳ ತಯಾರಿಕೆ ವಿಧಾನಗಳ ಪ್ರಕಟಣೆಯ ಪುಸ್ತಕಗಳ ಮಾರಾಟವೂ ಜೋರಾಗಿದೆ. -ಡಾ| ಮಂಜುನಾಥ ಎಸ್‌.ಬಿ., ಕೃಷಿ ವಿವಿ ನೈಸರ್ಗಿಕ ಕೃಷಿ ಯೋಜನೆ ಮುಂದಾಳು

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next