ಸಂಕಟವನ್ನು ನಿಭಾಯಿಸುವುದೆಂತು?
Advertisement
ಕೃಷಿ ಮತ್ತು ಪರಿಸರ ಸಂಬಂಧಿ ಸುದ್ದಿಗಳೇಕೆ ನಮಗೆ ಶಾಕ್ ನೀಡುತ್ತಿಲ್ಲ? ಪತ್ರಿಕೆಯ ಯಾವ್ಯಾವುದೋ ಸುದ್ದಿಗಳ ಬಗ್ಗೆ, ಟಿ.ವಿ. ಸಮಾಚಾರಗಳ ಬಗ್ಗೆ ಚರ್ಚಿಸುವ, ನಿದ್ದೆ ಬಿಡುವ ನಮಗೆ ಇತ್ತಿತ್ತಲಾಗಿ ಯಾವ ವಿಷಯಕ್ಕೆ ಆದ್ಯತೆ ಕೊಡಬೇಕೆಂಬುದು ಗೌಣವಾಗುತ್ತಿದೆಯೇ? ಈ ಪೀಠಿಕೆ ಏಕೆಂದರೆ ಇತ್ತೀಚೆಗೆ ಇದೇ ಪತ್ರಿಕೆಯಲ್ಲಿ ಕೃಷಿಯ ಬಗೆಗಿನ ಒಂದು ವರದಿ ಪ್ರಕಟವಾಗಿತ್ತು. ಅದೇನೆಂದರೆ, “”ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ ನಾಲ್ಕೇ ವರ್ಷಗಳಲ್ಲಿ 3,790 ಹೆಕ್ಟೇರ್ ಭತ್ತದ ಕೃಷಿ ಕುಸಿದಿದೆ” (ಎಲ್ಲ ತಾಲೂಕುಗಳಲ್ಲೂ ಪರಿಸ್ಥಿತಿ ಒಂದೇ). ನಿಜಕ್ಕೂ ನಿದ್ದೆಗೆಡಿಸುವ ವರದಿಯಿದು. ಹಾಗಿದ್ದರೆ ಕುಸಿದ ಭತ್ತದ ಕೃಷಿ ವ್ಯಾಪ್ತಿಯಲ್ಲಿ ಹೆಚ್ಚಾದ ಚಟುವಟಿಕೆಗಳಾವುವು? ಆಹಾರ ಬೆಳೆ ವ್ಯಾಪ್ತಿ ಕಡಿಮೆ ಆಗಿ ಆರ್ಥಿಕ ಬೆಳೆ ಹೆಚ್ಚಾಯಿತೇ? ಅಥವಾ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತಿತವಾಯಿತೇ? ಕೃಷಿಯೇತರವೆಂದಾದರೆ ಅದು ಯಾವುದು? ಎಂಬ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕೃಷಿ ಭೂಮಿ ಅದರಲ್ಲೂ ಆಹಾರದ ಬೆಳೆ ವಿಸ್ತಾರ ಕುಸಿಯುವುದೆಂದರೆ ಆತಂಕದ ವಿಚಾರ.
Related Articles
Advertisement
ದೇಶಕ್ಕೆ ಅನ್ನ ನೀಡುವವ ಯಾವತ್ತೂ ಸುಖೀಯಾಗಿರಬೇಕು. ದೇಶದ ಆರ್ಥಿಕ ನೀತಿಯಲ್ಲಿ ಅದಕ್ಕೆ ಮೊದಲ ಆದ್ಯತೆ ಸಿಗಬೇಕು. ಆದರೆ ನಮ್ಮಲ್ಲಿ ತದ್ವಿರುದ್ಧ. ಮೂಲಭೂತ ವ್ಯವಸ್ಥೆಗಳಲ್ಲಿ ತೊಡಗಿಕೊಂಡವರು, ಉತ್ಪಾದನಾಂಗ ಚಟುವಟಿಕೆಗಳಲ್ಲಿ ನಿರತರಾದವರು ದೇಶದ ಅಭಿವೃದ್ಧಿಗೆ ತಳಪಾಯ. ತಳಪಾಯವೇ ಅಪಾಯಕ್ಕೆದುರಾದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಬಹು ಕೋಟಿವಂತರ ಆದಾಯವೇ ತಲಾದಾಯವಾಗಿ ದೇಶ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಇಡೀ ದೇಶದಲ್ಲಿ ಲಕ್ಷಾಂತರ ಮಂದಿ ರೈತರು ಸಾವಿಗೀಡಾದ ವರದಿ ಇದೆ. ಕೈಗೆ ಬಂದ ತುತ್ತಿಗೆ ಕನಿಷ್ಠ ವೆಚ್ಚದಷ್ಟಾದರೂ ಬೆಲೆ ಸಿಕ್ಕರೆ ಸಾಕು ಎಂಬಲ್ಲಿಯವರೆಗಿನ ಹತಾಶೆಯ ಸ್ಥಿತಿ ರೈತನದ್ದು., ಇದೇ ಸಂದರ್ಭದಲ್ಲಿ ಕೃಷಿಯನ್ನವಲಂಬಿಸಿದ ಉದ್ಯಮಿಗಳು, ವ್ಯಾಪಾರಿಗಳು, ಸೇವಾ ವಲಯದವರ ಆತ್ಮಹತ್ಯೆ ಪ್ರಕರಣಗಳು ಇಲ್ಲವೆನ್ನುವಷ್ಟು ವಿರಳ ಎಕೆ?
ಸರಕಾರಗಳು ಆಗೊಮ್ಮೆ ಈಗೊಮ್ಮೆ ಘೋಷಿಸುವ ಸಾಲಮನ್ನಾಗಳು, ರಿಯಾಯಿತಿಗಳು, ಬೀಜ, ಗೊಬ್ಬರ, ಕೀಟನಾಶಕಗಳ ನೀಡಿಕೆ ಜೊತೆಗೆ ಉಚಿತ ಸಲಹೆಗಳು ನಮ್ಮ ರೈತಾಪಿ ಬಂಧುಗಳನ್ನು ಹಾಗೂ ಕೃಷಿಪರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಬಲೀಕರಣಗೊಳಿಸಲಾರದು. ಅದೆಲ್ಲ ಸಾಂದರ್ಭಿಕ ನಿರ್ವಹಣೆಯಷ್ಟೇ ಹೊರತು ನಿರಂತರತೆಗೆ ಇಂಬು ನೀಡದು.
ಸರಕಾರ ಕೃಷಿಕರಿಗೆ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು. ಸರಕಾರದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳು ಬೇಕಾದಷ್ಟಿವೆ. ಆದರೆ ಕೃಷಿ ಕ್ಷೇತ್ರವೇ ಬಹಳ ದೊಡ್ಡ ಉದ್ಯೋಗ ಕ್ಷೇತ್ರ (ಸೃಷ್ಟಿ ಮಾಡಬೇಕೆಂಬುದೇ ಇಲ್ಲ) ವೆಂಬುದರ ತಿಳುವಳಿಕೆಯೇ ಇಲ್ಲವೆ? ಇಂದಿನ ಬಹಳಷ್ಟು ಸಮಸ್ಯೆಗಳಿಗೆ ಮೂಲ ಕಾರಣವೇ ಕೃಷಿ ಕ್ಷೇತ್ರ ದುರ್ಬಲವಾದದ್ದು (ನವ ನಾಗರೀಕತೆಯ ಸಮಸ್ಯೆಗಳು).
ಯಾವುದೇ ಬೆಳೆಗಾರನಿಗೆ ತಾನು ಬೆಳೆಯುವ ಆಹಾರ ಬೆಳೆಗೆ ಅದರ ಉತ್ಪಾದನಾ ವೆಚ್ಚದ ನಾಲ್ಕು ಪಟ್ಟು ಬೆಲೆ ಸಿಗುವಂತಾಗಬೇಕು. ಆರ್ಥಿಕ ಬೆಳೆಯಾದರೆ ಅದರ ಉತ್ಪಾದನಾ ವೆಚ್ಚದ ಮೂರುಪಟ್ಟು ಬೆಲೆ ಸಿಗುವಂತಾಗಬೇಕು. ಈ ರೀತಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ಅಲ್ಲದೆ ಒಂದೊಮ್ಮೆ ಬೆಳೆ ಯಾವುದೇ ಕಾರಣದಿಂದ (ಸ್ವಂತ ಕಾರಣದ ಹೊರತು) ಹಾನಿಗೊಳಗಾಗಿ, ನಷ್ಟವುಂಟಾದರೆ ರೈತನ ಒಟ್ಟು ವಾರ್ಷಿಕ ಆದಾಯವನ್ನು ಸರಕಾರವೇ ಭರ್ತಿ ಮಾಡುವಂತಿರಬೇಕು. ಅಭಿವೃದ್ಧಿ ಯೋಜನೆಗಳು ಅಲ್ಲದೆ ಕೃಷಿ ಪರ ಚಟುವಟಿಕೆಗಳಲ್ಲಿ ಮತ್ತು ಕೃಷಿ ಕಾರ್ಮಿಕರಾಗಿ ದುಡಿಯುವವರಿಗೆ ಒಂದು ಭಾಗದ ಸಂಬಳವನ್ನು (ಉದ್ಯೋಗ ಖಾತ್ರಿ ಯೋಜನೆಯಂತೆ) ಸರಕಾರವೇ ನೀಡಬೇಕು. ಜೊತೆಗೆ ಭವಿಷ್ಯನಿಧಿ ಅಥವಾ ಪಿಂಚಣಿ ಯೋಜನೆಯನ್ನೂ ಜಾರಿಗೆ ತರಬೇಕು.
ಆರ್ಥಿಕ ಭದ್ರತೆಯ ಹೊರತಾಗಿ ಸರಕಾರವು ಕೃಷಿಕರಿಗೆ ಬೇರೇನೂ ನೀಡಬೇಕಾದ್ದಿಲ್ಲ. ಅನಾವಶ್ಯಕವಾಗಿ (ಅಭಿವೃದ್ಧಿ ಹೆಸರಿನಲ್ಲಿ, ಸುಧಾರಣೆಯ ಹೆಸರಲ್ಲಿ) ರೈತರ ಬದುಕಿನಲ್ಲಿ ಸರಕಾರ ಹಸ್ತಕ್ಷೇಪ ಮಾಡಕೂಡದು. ಒಟ್ಟು ಸಾಮಾಜಿಕ ವ್ಯವಸ್ಥೆಗಳಲ್ಲಿ ರೈತನಿಗೆ ಗತಕಾಲದ ಸ್ಥಾನಮಾನ ದೊರೆಯುವಂತಾಗಬೇಕು. ರೈತನಾಗುವುದು, ರೈತನ ಮಗನಾಗುವುದು ಹೆಮ್ಮೆಯ ಸಂಗತಿಯಾಗಬೇಕು. ಕೇವಲ ವೇದಿಕೆಯ ಹೇಳಿಕೆ ಮತ್ತು ಘೋಷಣೆಯಾಗಬಾರದು.
ರಾಮಕೃಷ್ಣ ಭಟ್ ಬೆಳಾಲು