ಮೂಡುಬಿದಿರೆ: ಕೃಷಿ ಋಷಿ, ಜಲಶೋಧಕ, ಮೆಡಿಸಿನಲ್ ವೀಲ್‌ನ ಸಫಲ ಪ್ರಯೋಗಶೀಲ, ಭೂಗರ್ಭದ ಶಕ್ತಿ ಕೇಂದ್ರಗಳ ವಿಶೇಷ ಜ್ಞಾನಿಯಾಗಿ ಲೋಕ ಪ್ರಸಿದ್ಧರಾಗಿ ಬುಧವಾರ ನಿಧನ ಹೊಂದಿದ ಸೋನ್ಸ್ ಫಾರ್ಮ್ ನ ಡಾ. ಎಲ್.ಸಿ. ಸೋನ್ಸ್ ಅವರ ಅಂತ್ಯಕ್ರಿಯೆ ಶುಕ್ರವಾರ ನಡೆಯುವುದರೊಂದಿಗೆ ಪ್ರಕೃತಿಯನ್ನು ಪ್ರೀತಿಸಿ, ಪ್ರಕೃತಿಯೊಂದಿಗೆ ಅವಿನಾಭಾವಿಯಾಗಿ ಜೀವಿಸಿದ ಕೃಷಿ ಋಷಿ ನೆಲದೊಳಗೆ ನೆಲೆಯಾದಂತಾಯಿತು.
ಸೋನ್ಸ್ ಫಾರ್ಮ್ ನ ಮನೆಯಲ್ಲಿ ರಿಸಲಾಗಿದ್ದ ಸೋನ್ಸರ ಪಾರ್ಥಿವ ಶರೀರ ದರ್ಶನಕ್ಕಾಗಿ `ಶುಭ ಶುಕ್ರವಾರ’ದ ದಿನ ಮುಂಜಾನೆಯಿಂದ ಸಂಜೆಯವರೆಗೆ ಬಂಧುಗಳು, ಒಡನಾಡಿಗಳು, ಅಭಿಮಾನಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಬನ್ನಡ್ಕದ ಕ್ರಿಸ್ತಶಾಂತಿ ಚರ್ಚ್ ನ ರೆವರೆಂಡ್ ಫಾ. ಇಮ್ಯಾನ್ಯುವೆಲ್ ಜಯಕರ ಅವರು ಡಾ. ಸೋನ್ಸರ ಜೀವನಗಾಥೆ ತೆರೆದಿಟ್ಟು ವಿಶೇಷ ಪ್ರಾರ್ಥನೆಗೈದರು. ತನಗೂ ಒಂದೊಮ್ಮೆ ಕೃಷಿ ಪಾಠ ಹೇಳಿದ್ದ ದಿನಗಳನ್ನು ಅವರು ಸ್ಮರಿಸಿಕೊಂಡರು.
ರೋಟರಿ ಮಿತ್ರ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ಸೋನ್ಸರು ಪರ್‌ಫೆಕ್ಟ್ ಜಂಟಲ್ ಮ್ಯಾನ್, ಸಮಾಜದಲ್ಲಿ ಕೊನೆ ಕ್ಷಣದವರೆಗೂ ರೆಲೆವೆಂಟ್ ಆಗಿಯೇ 89 ವರ್ಷದುದ್ದಕ್ಕೂ ಬದುಕಿದವರು ಎಂದರು.
ಮಂಗಳವಾರ ಅವರ ಹುಟ್ಟುದಿನ. ಶುಭಾಶಯ ಸಲ್ಲಿಸಲೆಂದು ಬಂದಾಗ ಅವರು ಯಾರದೋ ಆರೋಗ್ಯ ವಿಚಾರಿಸಿ ಕ್ಷೇಮಸೂತ್ರ ತಿಳಿಸಲು ಹೋಗಿದ್ದರು. ಮರುದಿನ ಶುಭಾಶಯ ಸಲ್ಲಿಸಲು ಬಂದರೆ ಸೋನ್ಸರು ಇನ್ನಿಲ್ಲವಾಗಿದ್ದರು ಎಂಬುದನ್ನು ವಿಷಾದಕರವಾಗಿ ತಿಳಿಸಿದರು. ಸೋನ್ಸರು ಅಜಾತಶತ್ರು, ಯಾರಿಗೂ ಕೆಟ್ಟಮಾತು ಹೇಳಿಲ್ಲ, ಯಾರಿಂದಲೂ ಕೆಟ್ಟ ಮಾತು ಕೇಳಿಸಿಕೊಂಡಿಲ್ಲ. ಅವರ ಆದರ್ಶಗಳ ಪಾಲನೆಯೇ ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ ಎಂದರು ಗಣಪಯ್ಯ ಭಟ್ಟರು.
ಪುತ್ರಿ ಸೋನಿಯಾ ಮಾರ್ಟಿನ್, ತಂದೆಯವರು ತನ್ನ ನೋವು ಲೆಕ್ಕಿಸದೆ, ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಬೇಕಾಗಿ ಬದುಕಿದವರು ಎಂದರು.
ಪತ್ನಿ ಬೆನಿಟಾ ಸೋನ್ಸ್, ಅಳಿಯ ಸಂತೋಷ್ ಮಾರ್ಟಿನ್, ಪುತ್ರರಾದ ಸುನಿಲ್ ಸೋನ್ಸ್, ವಿನೋದ್ ಸೋನ್ಸ್, ಕಿರಿಯ ಪುತ್ರಿ ಸಹನಾ ಪಾಲನ್ನ , ಸೋನ್ಸರ ಸಹೋದರ ಐ.ವಿ. ಸೋನ್ಸ್ ಸಹಿತ ಕುಟುಂಬ ಪರಿವಾರದವರು, ಬಂಧುವರ್ಗದವರಿದ್ದರು.
ಗಣ್ಯರಾದ ಮಂಗಳೂರು ಬಿಷಪ್ ಸಿ.ಎಲ್. ಪುರ್ಟಾಡೋ, ರೆ.ಫಾ. ವಿಲಿಯಂ ಕುಂದರ್, ಮಾಜಿ ಸಚಿವ ಅಭಯಚಂದ್ರ, ಶಾಸಕ ಉಮಾನಾಥ ಕೋಟ್ಯಾನ್, ಜೆ. ಆರ್. ಲೋಬೋ, ಮಿಥುನ್ ರೈ, ಡಾ. ಎಂ. ಮೋಹನ ಆಳ್ವ, ಉಡುಪಿ ಗೋವಿಂಧ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಜಗದೀಶ ಶೆಟ್ಟಿ , ಭುವನ್ ಪ್ರಸಾದ್ ಹೆಗ್ಡೆ ಮಣಿಪಾಲ, ಎ.16ರಂದು ಬಿಡುಗಡೆಯಾಗಲಿದ್ದ ಸೋನ್ಸ್ ಕುರಿತಾದ ಪುಸ್ತಕ ಬರೆದ ನರೇಂದ್ರ ರೈ ದೇರ್ಲ, ಸೋನ್ಸರ ಕುರಿತು ಎರಡನೇ ಪುಸ್ತಕ ಸಿದ್ಧ ಪಡಿಸಿರುವ ಡಾ. ಶೇಖರ ಅಜೆಕಾರು, ಮೂಡುಬಿದಿರೆ ರೋಟರಿಯ ಕೊನೆಯ ಸ್ಥಾಪಕ ಸದಸ್ಯ ಡಾ. ಬಿ. ರತ್ನಾಕರ ಶೆಟ್ಟಿ , ಈಗಿನ ಅಧ್ಯಕ್ಷ ಮಹಮ್ಮದ್ ಆರಿಫ್, ಡಾ. ಹರೀಶ್ ನಾಯಕ್ ಸಹಿತ ರೋಟರಿಯ ಎಲ್ಲ ಒಡನಾಡಿಗಳು, ಮೂಡುಬಿದಿರೆಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಊರ ಪರವೂರ, ಹತ್ತಾರು ಬಗೆಯಲ್ಲಿ ಒಡನಾಡಿ, ಮಿತ್ರರಾಗಿದ್ದ ವರು, ಅಭಿಮಾನಿಗಳಾಗಿದ್ದವರು ಕೃಷಿಯ ಜತೆಜತೆಗೆ ಶಿಕ್ಷಣ, ಆರೋಗ್ಯ ಸಹಿತ ಹಲವು ರಂಗಗಳಲ್ಲಿ ಸಮಾಜಮುಖಿಯಾಗಿ ಉಸಿರಾಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನ ಸಲ್ಲಿಸಿದರು.
ಗಂಟೆ ಸ್ತಬ್ಧ :
ಸಂಜೆ ಶ್ರಮಿಕರ ವೇಳೆ ಮುಗಿಯುವಾಗ ಢಣ್ ಢಣ್ ಢಣ್ ಸದ್ದು ಹೊರಡಿಸುತ್ತಿದ್ದ ಮನೆಯಂಗಳದಲ್ಲಿರುವ ಗಂಟೆ ಸ್ತಬ್ಧವಾಗಿದ್ದು ಕೃಷಿಋಷಿಯ ಅಂತಿಮ ಯಾತ್ರೆಗೆ ಮೌನ ವಿದಾಯ ಸಲ್ಲಿಸಿದಂತಿತ್ತು.
ಸೋನ್ಸರು ನೆಟ್ಟು ಪೋಷಿಸಿದ ಗಿಡ ಮರಗಳು ಮರುಗಿದವು. ಅರಳಿದ ಹೂಗಳ ಮುಖ ಬಾಡಿ ನೆಲ ನೋಟಕರಾದವು
ತಮ್ಮೊಡೆಯ ಮನೆಯ ಗೇಟು ದಾಟಿ ಹೋಗುವಾಗ.
ಜಲ ಶೋಧನ ಮಾಂತ್ರಿಕನಿಗೆ ಬಾನಿಂದ ಜಲ ಸಿಂಚನ :
ಸೋನ್ಸರ ಪಾರ್ಥಿವ ಶರೀರ ಇನ್ನೇನು ಅಂತಿಮ ಯಾತ್ರಾವಾಹನದೊಳಗೆ ಇರಿಸುವ ಮುನ್ನ ಗಗನದಲ್ಲಿ ಲಘುವಾದ ಗುಡುಗು ವಿದಾಯದ ಬ್ಯಾಂಡ್ ನುಡಿಸಿದಂತಿದ್ದರೆ, ಕ್ರಿಸ್ತಶಾಂತಿ ಚರ್ಚ್ ನ ಶ್ಮಶಾನದಲ್ಲಿ ನೆಲದಾಳದಲ್ಲಿ ನೆಲೆಯಾಗಿ ಮಣ್ಣು ಮುಚ್ಚಿದಾಗ ಅಪರೂಪವಾಗಿ ಬಾನಿನಿಂದ ಜಲ ಸಿಂಚನವಾಯಿತು; ಇದು ಪ್ರಕೃತಿಯ ಜಲ ತರ್ಪಣ ಎಂದು ನೆರೆದವರು ಉದ್ಗರಿಸಿದರು.