Advertisement

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

04:54 PM Oct 24, 2021 | Team Udayavani |

ಬೆಂಗಳೂರು: ರೈತರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 30,85,644 ರೈತರಿಗೆ 20810 ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈಗಾಗಲೇ 12,35,033 ರೈತರಿಗೆ 9,136 ಕೋಟಿ 89 ಲಕ್ಷ ರೂಪಾಯಿ ಸಾಲವನ್ನು ನೀಡಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

Advertisement

ಈ ಕುರಿತು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಬಾರಿ ಸಾಲ ನೀಡಿಕೆಯಲ್ಲಿ ಮಾಡಲಾಗಿದ್ದ ಶೇಕಡಾ 115ರಷ್ಟು ಸಾಧನೆ ಮೀರಿ ಈ ಬಾರಿ ಶೇಕಡಾ 125ರಷ್ಟು ಸಾಧನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.  ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವುದೇ ನಮ್ಮ ಸರ್ಕಾರದ ಉದ್ದೇಶ. ನಮ್ಮದು ರೈತಪರ, ರೈತರ ಸಂಕಷ್ಟಗಳಿಗೆ ಸದಾ ಮಿಡಿಯುವ, ಸ್ಪಂದಿಸುವ ಸರ್ಕಾರವಾಗಿದೆ. ರೈತರ ಸ್ವಾವಲಂಬಿ ಬದುಕಿಗೆ ಬೇಕಿರುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಸದಾ ಮುಂದು ಎಂಬುದನ್ನು ಕಳೆದ ಬಾರಿ ಕೃಷಿ ಸಾಲ ವಿತರಣೆಯಲ್ಲಿ ಶೇ. 115 ಸಾಧನೆ ಮಾಡುವ ಮೂಲಕ ಸಾಬೀತುಪಡಿಸಿದ್ದೇವೆ. ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರೂ ಸಹ ರೈತರಿಗೆ ಸಮಸ್ಯೆಯಾಗದಂತೆ, ಸಮರ್ಪಕವಾಗಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಅಕ್ಟೋಬರ್ ತಿಂಗಳಲ್ಲೇ ಶೇ. 72.76 ಸಾಧನೆ:

ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿಯೇ ಅಲ್ಪಾವಧಿ, ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆಯಲ್ಲಿ ಗಮನಾರ್ಹ ಸಾಧನೆಯನ್ನು ನಾವು ಮಾಡಿದ್ದೇವೆ. ಅಲ್ಪಾವಧಿ ಸಾಲ ನೀಡಿಕೆ ವಿಭಾಗದಲ್ಲಿ 30,25,788 ರೈತರಿಗೆ 19,370 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹೊಂದಿದ್ದು, ಈಗಾಗಲೇ 12,25,027 ರೈತರಿಗೆ 8,742.10 ಕೋಟಿ ರೂಪಾಯಿ ಸಾಲವನ್ನು ವಿತರಿಸಿ ಶೇಕಡಾ 45.55 ಸಾಧನೆ ತೋರಲಾಗಿದೆ. ಅಲ್ಲದೆ, ಮಧ್ಯಮಾವಧಿ/ದೀರ್ಘಾವಧಿ ಸಾಲ ನೀಡಿಕೆ ವಿಭಾಗದಲ್ಲಿ 59,856 ರೈತರಿಗೆ 1,440 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಲ್ಲಿ 10009 ರೈತರಿಗೆ 394.79 ಕೋಟಿ ರೂಪಾಯಿಯನ್ನು ಸಾಲವಾಗಿ ವಿತರಿಸಲಾಗಿದೆ. ಈ ಮೂಲಕ ಶೇಕಡಾ 27.41ರಷ್ಟು ಸಾಧನೆ ತೋರಲಾಗಿದೆ. ಅಂದರೆ, ಈ ಮೂರೂ ವಿಭಾಗದಲ್ಲಿ ಒಟ್ಟಾರೆಯಾಗಿ 30,85,644 ರೈತರಿಗೆ 20810 ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯಲ್ಲಿ ಈಗಾಗಲೇ ಅಕ್ಟೋಬರ್ 23ರವರೆಗೆ 12,35,033 ರೈತರಿಗೆ 9,136.89 ಕೋಟಿ ರೂಪಾಯಿ ಸಾಲವನ್ನು ನೀಡುವ ಮುಖಾಂತರ ಶೇಕಡಾ 72.96 ಸಾಧನೆಯನ್ನು ನಾವು ಈಗಾಗಲೇ ತೋರಿದ್ದೇವೆ ಎಂದರು.

ಇದನ್ನೂ ಓದಿ: ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

Advertisement

ಶೇಕಡಾ 125 ಸಾಲ ನೀಡಿಕೆ ಗುರಿ ನಮ್ಮದು – ಎಸ್ ಟಿ ಎಸ್:

ಕಳೆದ ಸಾಲಿನಲ್ಲಿ 25.12 ಲಕ್ಷ ರೈತರಿಗೆ 15,802 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ನಾನು ಇಲಾಖೆಯಲ್ಲಿ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಿದ್ದಲ್ಲದೆ, ಡಿಸಿಸಿ ಬ್ಯಾಂಕ್‌ಗಳಿಗೆ ಖುದ್ದು ಭೇಟಿ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದೆ. ಅಲ್ಲದೆ, ಬ್ಯಾಂಕ್‌ಗಳ ಕುಂದುಕೊರತೆಗಳನ್ನೂ ನಿವಾರಿಸಿದ್ದೆ. ಈ ನಿಟ್ಟಿನಲ್ಲಿ ನಮ್ಮ 21 ಡಿಸಿಸಿ ಬ್ಯಾಂಕ್‌ಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಇದರ ಪರಿಣಾಮವಾಗಿ 26,19,015 ರೈತರಿಗೆ 17,901.21 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಿ ಒಟ್ಟು ಶೇಕಡಾ 115 ರಷ್ಟು ಸಾಧನೆಯನ್ನು ನಾವು ತೋರಿದ್ದೇವೆ. ಈ ಬಾರಿ ನೂರಕ್ಕೆ ನೂರು ಗುರಿ ಮುಟ್ಟುವುದಲ್ಲದೆ, ಕಳೆದ ಬಾರಿಯ ಸಾಧನೆಗಿಂತಲೂ ಹೆಚ್ಚಿನ ಸಾಧನೆ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನಗಳು ಸಾಗಿವೆ. ಹಾಗಾಗಿ ಪ್ರಸಕ್ತ ಬಾರಿ ಶೇಕಡಾ 125ರಷ್ಟು ಸಾಲ ನೀಡಿಕೆಯತ್ತ ನಮ್ಮೆಲ್ಲರ ಚಿತ್ತವನ್ನು ಹರಿಸಿದ್ದೇವೆ. ನಾನೂ ಸಹ ಕಾಲ ಕಾಲಕ್ಕೆ ಡಿಸಿಸಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ಮಾಡುವುದಲ್ಲದೆ, ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇನೆ ಎಂದರು.

ಶೀಘ್ರದಲ್ಲೇ ಡಿಸಿಸಿ ಬ್ಯಾಂಕ್‌ಗಳ ಸಭೆ:

ಡಿಸಿಸಿ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದೇನೆ. ಈ ಮೂಲಕ ಬ್ಯಾಂಕ್‌ಗಳು ತೋರಿರುವ ಸಾಧನೆ, ಎದುರಿಸುತ್ತಿರುವ ಸಣ್ಣಪುಟ್ಟ ತೊಡಕುಗಳು, ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ, ಪರಿಹಾರಗಳನ್ನು ಸೂಚಿಸಲಾಗುವುದು ಎಂದು ಹೇಳಿದರು.

ರೈತರಿಗೆ ಸಮಸ್ಯೆಯಾಗದಂತೆ ಸಾಲ ವಿತರಣೆಗೆ ಸೂಚನೆ:

ರೈತರ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸಹ 21 ಡಿಸಿಸಿ ಬ್ಯಾಂಕ್‌ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಹ ಫಲಾನುಭವಿಗಳಿಗೆ ಸಾಲ ಕೊಡುವಂತೆ ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next