ದೊಡ್ಡಬಳ್ಳಾಪುರ: ಪಾರಂಪರಿಕ ಕೃಷಿಯ ಜ್ಞಾನ ಹಾಗೂ ಅನುಭವ, ಸಮೃದ್ಧ ಫಸಲಿಗಾಗಿ ರೈತರು ಕೈಗೊಳ್ಳುವ ಕ್ರಮಗಳನ್ನು ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಕೃಷಿ ಪದವಿ ವಿದ್ಯಾರ್ಥಿಗಳಿಗೆ 4 ತಿಂಗಳ ಗ್ರಾಮ ವಾಸ್ತವ್ಯ ಶಿಬಿರ ಆಯೋಜಿಸಲಾಗುತ್ತದೆ. ಈ ಅನುಭವ ಜೀವನದುದ್ದಕ್ಕೂ ಉಪಯೋಗವಾಗುತ್ತದೆ ಎಂದು ರೈ ತಾಂತ್ರಿಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಮುರಾರಿನಾಯ ಕ್ ಹೇಳಿದರು.
ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ರೈ ತಾಂತ್ರಿಕಾ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ನಾಲ್ಕು ತಿಂಗಳ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಸ್ಥಿತಿಗತಿ ಅರಿಯಲು ಸಹಕಾರಿ: ಗ್ರಾಮದಲ್ಲಿಯೇ ಇದ್ದು ರೈತರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅರಿಯಲು ಸಹಕಾರಿಯಾಗಲಿದೆ. ರೈತರಲ್ಲಿ ಇರುವ ಪಾರಂಪರಿಕ ಕೃಷಿ ಜ್ಞಾನವನ್ನು ಕಲಿಯಬೇಕು. ಅಧುನಿಕ ಕೃಷಿಯೊಂದಿಗೆ ರೈತರ ಜ್ಞಾನವನ್ನು ಸಮ್ಮಿಲನಗೊಳಿಸಬೇಕು. ಹಸಿರು ಕ್ರಾಂತಿಯ ನಂತರ ದೇಶದಲ್ಲಿ ಆಹಾರದ ಕೊರತೆ ನೀಗಿದೆ. ಆದರೆ ಮಣ್ಣಿನ ಫಲವತ್ತತೆ, ನಾಟಿ ಬೀಜಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ರೈತರು ಈಗ ಬೀಜಗಳಿಗಾಗಿ ಕಂಪನಿಗಳ ಮೇಲೆ ಅವಲಂಬಿತರಾಗುವಂತಾಗಿದೆ ಎಂದರು.
ಬೆಳೆ ಬೆಳೆಯುವ ವಿಧಾನ ತಿಳಿದುಕೊಳ್ಳಿ: ರೈ ತಾಂತ್ರಿಕಾ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ.ಸ್ವಾಮಿ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕು ಭೌಗೋಳಿಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದೆ. ಹೀಗಾಗಿಯೇ ಇಲ್ಲಿ ವೈವಿಧ್ಯಮಯ ಹಣ್ಣು, ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಬೆಳೆಯಲು ಉತ್ತಮ ವಾತಾವರಣ ಇದೆ. ಇದನ್ನು ಇಲ್ಲಿನ ರೈತರು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹನಿ ನೀರನ್ನು ವ್ಯರ್ಥ ಮಾಡದೆ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಹೋರಾಟದಿಂದ ಕೆಲ ಬದಲಾವಣೆ: ರಾಜ್ಯ ರೈತ ಸಂಘದ ಮುಖಂಡ ಪ್ರಸನ್ನ ಮಾತನಾಡಿ, ರೈತ ಸಂಘ ನಡೆಸಿರುವ ಹಲವಾರು ಹೋರಾಟಗಳ ಫಲವಾಗಿ ಇಂದು ಸರ್ಕಾರಗಳು ತಮ್ಮ ನೀತಿಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿವೆ. ಆದರೆ ಜಾಗತೀಕರಣದ ನಂತರ ಬರುತ್ತಿರುವ ಬಹುತೇಕ ಕಾನೂನು, ನೀತಿಗಳು ರೈತರ ವಿರುದ್ಧವಾಗಿಯೇ ಇವೆ. ಬೆಂಬಲ ಬೆಲೆ ಘೋಷಣೆ ಬರೀ ರೈತರನ್ನು ಮೆಚ್ಚಿಸುವ ಸಲುವಾಗಿ ಇದೆಯೇ ಹೊರತು ಎಂದೂ ಸಹ ಬೆಂಬಲ ಬೆಲೆ ಯೋಜನೆಯಲ್ಲಿ ಸೂಕ್ತ ಸಮಯಕ್ಕೆ ಆಹಾರ ಧಾನ್ಯಗಳ ಖರೀದಿ ನಡೆದಿಲ್ಲ ಎಂದರು.
ದರ್ಗಾಜೋಗಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಪದವೀಧರ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ ಇದ್ದು, ರೈತರ ಹೊಲಗಳಲ್ಲಿ ಕಲಿಯುವಂತೆ ಕಂದಾಯ, ನ್ಯಾಯಾಂಗ ಹಾಗೂ ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಅಧಿಕಾರಿಗಳು ಸಹ 6 ತಿಂಗಳ ಕಾಲ ಗ್ರಾಮಗಳಲ್ಲೇ ಇದ್ದು ಜನರ ಕಷ್ಟ-ಸುಖಗಳನ್ನು ಹತ್ತಿರದಿಂದ ನೋಡಿ ಅರಿತುಕೊಳ್ಳಬೇಕು ಎಂದರು.
ನಾಗಸಂದ್ರ ಎಂಪಿಸಿಎಸ್ ಅಧ್ಯಕ್ಷ ಎನ್.ಮಹೇಶ್, ಕಾರ್ಯನಿರ್ವಾಹಕ ಎಂ.ದೇವರಾಜ್, ಪ್ರಗತಿಪರ ರೈತರಾದ ಮಲ್ಲಪ್ಪ, ಎನ್.ಎಂ.ನಟರಾಜ್ ಹಾಗೂ ಗ್ರಾಮಸ್ಥರು ಇದ್ದರು. ವಿದ್ಯಾರ್ಥಿಗಳು ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.