ಸಿಂದಗಿ: ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವ ಹಿನ್ನೆಲೆ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಸರಿಯಾದ ಸಮಯಕ್ಕೆ ಮುಂಗಾರು ಆಗಮಿಸಿದ್ದರಿಂದ ರೈತರು ಜಮೀನು ಹದಗೊಳಿಸಿದ್ದಾರೆ. ಬಿತ್ತನೆಗೆ ಎತ್ತುಗಳ ಕೊರತೆಯ ಹಿನ್ನೆಲೆಯಲ್ಲಿ ಬಹುತೇಕ ರೈತರು ಟ್ರಾÂಕ್ಟರ್ ಮೊರೆ ಹೋಗಿದ್ದಾರೆ.
ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಸಾಕಷ್ಟು ಮಳೆಯಾಗಿದೆ. ಸರಾಸರಿ 45 ಮಿಮೀ ಮಳೆಯಾಗಿದ್ದು ಕೋವಿಡ್ ಸಂಕಷ್ಟದ ಮಧ್ಯೆಯೂ ಕೃಷಿ ಚಟುವಟಿಕೆಗಳು ನಿಂತಿಲ್ಲ. ಸಿಂದಗಿ ಮತ್ತು ಆಲಮೇಲ ಹೋಬಳಿಗಳಲ್ಲಿ ಕಳೆದೆರಡು ದಿನಗಳಿಂದ ಬಿತ್ತನೆ ಕೆಲಸ ಚುರುಕುಗೊಂಡಿದೆ.
ಬಿತ್ತನೆ ಬೀಜದ ದಾಸ್ತಾನು: ಹೋಬಳಿಯಲ್ಲಿ ಪ್ರಮುಖ ಬೆಳೆ ತೊಗರಿಯಾಗಿದ್ದು ಬಹುಪಾಲು ರೈತರು ಕೇಂದ್ರದಲ್ಲಿ ಲಭ್ಯವಿರುವ ಬಿತ್ತನೆ ಬೀಜಗಳನ್ನು ಬಳಸುತ್ತಾರೆ, ತೊಗರಿ ಸಿಂದಗಿ ರೈತ ಸಂಪರ್ಕ ಕೇಂದ್ರದಲ್ಲಿ 170 ಕ್ವಿಂಟಲ್, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಯಂಕಂಚಿ ಪಿಕೆಪಿಎಸ್‌ನಲ್ಲಿ 100 ಕ್ವಿಂಟಲ್, ಸಜ್ಜೆ 2.7 ಕ್ವಿಂಟಲ್, ಸೂರ್ಯಕಾಂತಿ 1.2 ಕ್ವಿಂಟಲ್, ಹೆಸರು 1 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ.
ಆಲಮೇಲ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ 171 ಕ್ಷಿಂಟಲ್, ಮೆಕ್ಕೆ ಜೋಳ 980 ಕೆ.ಜಿ., ಸಜ್ಜೆ 180 ಕೆಜಿ, ಹೆಸರು 60 ಕೆಜಿ ಬಿತ್ತನೆ ಬೀಜ ದಾಸ್ತಾನು ಇದೆ. ಬಿತ್ತನೆ ಗುರಿ: ಕಬ್ಬು 15 ಸಾವಿರ ಹೆಕ್ಟೇರ್, ತೊಗರಿ 72800 ಹೆ., ಹತ್ತಿ 24000 ಹೆ., ಮೆಕ್ಕೆಜೋಳ 2500 ಹೆ., ಸಜ್ಜೆ 500 ಹೆ., ಸೆಂಗಾ 400 ಹೆ., ಹೆಸರು 280 ಹೆ., ಸೂರ್ಯಕಾಂತಿ 200 ಹೆ., ಹೀಗೆ ಇತರೆ ಬೆಳೆಗಲಾದ ಉದ್ದು, ಅಲಸಂದಿ, ಸಿರಿ ಧಾನ್ಯಗಳು, ಸೋಯಾ ಸೇರಿದಂತೆ ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.