ಜೇವರ್ಗಿ: ಕಳೆದ ಎರಡೂ¾ರು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರ ಮಳೆ ಬೀಳುತ್ತಿರುವುದರಿಂದ ಲಾಕ್‌ಡೌನ್ ಮಧ್ಯೆಯೂ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಉಳುಮೆ ಮಾಡಿ ಭೂಮಿ ಹದಗೊಳಿಸುತ್ತಿದ್ದಾರೆ. ಲಾಕ್‌ಡೌನ್ ಘೋಷಿಸಿದ ಪರಿಣಾಮ ನಗರ ಪ್ರದೇಶಗಳಿಗೆ ಕೆಲಸ ಅರಸಿ ಹೋದ ನೂರಾರು ಯುವಕರು, ಮಹಿಳೆಯರು ತಮ್ಮ ಗ್ರಾಮಗಳಿಗೆ ಮರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಇದರಿಂದ ತಾಲೂಕಿನಲ್ಲಿ ಕೃಷಿ ಕೂಲಿಕಾರ್ಮಿಕರ ಸಮಸ್ಯೆ ನೀಗಿದಂತಾಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ದಾಸ್ತಾನು ಸಂಗ್ರಹಿಸಿಡುವ ಮೂಲಕ ಕೃಷಿ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ. ಜೇವರ್ಗಿ ಸೇರಿದಂತೆ ಆಂದೋಲಾ, ಇಜೇರಿ, ನೆಲೋಗಿ, ಯಡ್ರಾಮಿ ಹೋಬಳಿಗಳ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಗೂ ಮುಂಗಾರು ಹಂಗಾಮಿನಲ್ಲಿ 8.25 ಲಕ್ಷ ಟನ್ ಉತ್ಪಾದನಾ ಗುರಿ ಹೊಂದಲಾಗಿದೆ.
ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳ 1,000 ಹೆಕ್ಟೇರ್, ಹೆಸರು 1,250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಬೀಜ ದಾಸ್ತಾನು ಸಂಗ್ರಹದ ಮೂಲಕ ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ವಿತರಣೆ ಪ್ರಕ್ರಿಯೆ ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಿಯಾಯ್ತಿ ದರದಲ್ಲಿ ತೊಗರಿ, ಹೆಸರು, ಸಜ್ಜೆ ಸೂರ್ಯಕಾಂತಿ, ಮೆಕ್ಕೆ ಜೋಳ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಎಲ್ಲ ಹೋಬಳಿಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅ ಧಿಕೃತ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರು ಬಿತ್ತನೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಬಿತ್ತನೆಗೆ ಭೂಮಿಯ ಹದ ಅರಿತು (ಬಿತ್ತನೆಗೆ ಯೋಗ್ಯವಾದ) ಕಾರ್ಯ ಕೈಗೊಳ್ಳಬಹುದಾಗಿದೆ.
ಬಿತ್ತನೆಗೂ ಮುನ್ನ ರೋಗ ಮತ್ತು ಕೀಟಗಳ ಹತೋಟಿಗಾಗಿ ಬೀಜೋಪಚಾರ ಕೈಗೊಳ್ಳಲು ತಾಂತ್ರಿಕ ಸಲಹೆ ಅನುಸರಿಸಲು ಕೋರಲಾಗಿದೆ. ಕೊರೊನಾ ಪ್ರಯುಕ್ತ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಪರಿಕರಗಳನ್ನು ತೆಗೆದುಕೊಳ್ಳಲು ಕೋರಲಾಗಿದೆ