ದೇವನಹಳ್ಳಿ: ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಎಲ್ಲೆಡೆ ಭೂಮಿಯನ್ನು ಹದ ಮಾಡಿ ಬಿತ್ತನೆ ಕಾರ್ಯ ಮಾಡುವುದಕ್ಕೆ ರೈತರು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮಳೆಯಾಶ್ರಿತ ಪ್ರದೇಶ ಆಗಿರುವುದರಿಂದ ಮಳೆಯನ್ನೇ ನಂಬಿ ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಮಾಡುತ್ತಾರೆ. ಇರುವ ಅಲ್ಪಸ್ವಲ್ಪದ ಭೂಮಿಯಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ತಾಲೂಕಿನ ಕುಂದಾಣ ಹೋಬಳಿಯ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ರಾಗಿ ಬಿತ್ತನೆ, ಆಲೂಗಡ್ಡೆ ಇನ್ನಿತರೆ ಕೃಷಿ ಬೇಸಾಯ ಮಾಡಲು ಮುಂದಾಗಿದ್ದು, ಭೂಮಿ ತೇವಾಂಶ ಹೆಚ್ಚಾಗಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಮುಟುಕು ಗೊಳಿಸುತ್ತಿದ್ದಾರೆ.
ಭೂಮಿ ಹದ ಮಾಡುವ ಕಾರ್ಯ:ಭೂಮಿ ಹದ ಮಾಡಲು ಎತ್ತುಗಳನ್ನು ಬಳಸಿಕೊಂಡು ಅಲುವೆ ಮೂಲಕ ರಾಗಿಯನ್ನು ಬಿತ್ತನೆ ಕಾರ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ, ಕೆಲ ರೈತರು ಆಲೂಗಡ್ಡೆ ಬೆಳೆ ಇಡಲು ತಮ್ಮ ಭೂಮಿಯನ್ನು ಫಲವತ್ತತೆಯನ್ನಾಗಿಸಲು ಎತ್ತುಗಳನ್ನು ಬಳಸಿಕೊಂಡು ಉಳುಮೆಗೆ ಮುಂದಾಗಿದ್ದಾರೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಗ್ರಾಮೀಣ ಭಾಗದ ರೈತರು ಯಾವುದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಲು ಸಾಕಷ್ಟು ಅಡ್ಡಿಯಾಗುತ್ತಿದ್ದರಿಂದ ನಿರೀಕ್ಷಿತ ಸಮಯಕ್ಕೆ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗಲಿಲ್ಲ.
ಉಳುಮೆ ಮಾಡಲು ಉತ್ತಮ ಸಮಯ: ಒಂದಿಷ್ಟು ಮಳೆ ಕಡಿಮೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆಯಲ್ಲಿ ರೈತರು, ಮಳೆಗಾಲದಲ್ಲಿ ಬೆಳೆಯನ್ನಿಡಲು ಅನನುಕೂಲವಾಗುತ್ತಿದೆ. ಪದೇ ಪದೆ ಮಳೆಯಾಗುತ್ತಿದ್ದರೆ ಕೃಷಿ ಚಟುವಟಿಕೆ ನಡೆಸಲು ಆಗುತ್ತಿಲ್ಲ. ಕೆಲವು ಕಡೆ ನೀರು ತುಂಬಿ ರೈತರ ಜಮೀನುಗಳು ಮುಳುಗಡೆಯಾಗಿದೆ. ಆದರೂ ಈ ಭಾಗದಲ್ಲಿ ಯಾವುದೇ ಜಮೀನುಗಳಲ್ಲಿ ಮಳೆ ನೀರು ನಿಲ್ಲದಿರುವುದರಿಂದ ಕೃಷಿ ಚಟುವಟಿಕೆ ಮಾಡಲು ಉತ್ತಮ ಸಮಯವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಮಳೆಯಿಂದ ಆಲೂಗಡ್ಡೆ ಬೆಳೆಯನ್ನಿಡಲು ಒಂದು ತಿಂಗಳು ತಡವಾಗಿದೆ. ಈಗಾಗಲೇ ಸಾಲು ಬರಬೇಕಿತ್ತು. ಸ್ವಲ್ಪ ಮಳೆ ನಿಂತಿದ್ದರಿಂದ ಸುಮಾರು ಒಂದು ಎಕರೆಯಷ್ಟು ಭೂಮಿ ಹದಗೊಳಿಸಿ, ಗಡ್ಡೆಯನ್ನು ಸಾಲುಗಳ ಮೂಲಕ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದೇವೆ. –
ಪಿಳ್ಳಪ್ಪ, ರೈತ, ದೇವಗಾನಹಳ್ಳಿ
ಮಳೆ ಕಡಿಮೆ ಇರುವಾಗಲೇ ರಾಗಿ ಬೆಳೆಯನ್ನು ಇಡಲು ಸುಮಾರು 3 ಎಕರೆ ಪ್ರದೇಶದಲ್ಲಿ ಎತ್ತು ಬಳಸಿಕೊಂಡು ಉಳುಮೆ ಮಾಡಲಾಗುತ್ತಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಮುಗಿಸಿ, ರಾಗಿ ಮೊಳಕೆ ಕಾಣಿಸುತ್ತಿದೆ. ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಹಿಂದೇಟು ಆಗಿದೆ. –
ಸಿಂಗ್ರಿ, ರೈತ, ಚೀಮನಹಳ್ಳಿ