ಅಳ್ನಾವರ: ಏಪ್ರಿಲ್, ಮೇ ತಿಂಗಳಲ್ಲಿ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆಗಳು ಈ ಭಾಗದಲ್ಲಿ ಇದೀಗ ಆರಂಭಗೊಂಡಿವೆ. ಮಳೆ ಇಲ್ಲದೆ ಚಿಂತೆಯಲ್ಲಿ ಮುಳುಗಿದ್ದ ರೈತರಲ್ಲಿ ಕಳೆದ ವಾರ ಒಂದೆರಡು ದಿವಸ ಸುರಿದ ಮಳೆ ಆಶಾ ಭಾವನೆ ಮೂಡಿಸಿದೆ.
ಬಿತ್ತನೆಗೆ ಅಗತ್ಯವಿರುವಷ್ಟು ಭೂಮಿ ಹಸಿಯಾಗದಿದ್ದರೂ ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಒಣ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸುತ್ತಿದ್ದರೂ ರೈತರು ಆಸಕ್ತರಾಗಿರಲಿಲ್ಲ. ಆದರೀಗ ಮಳೆಯಾಗಿದ್ದರಿಂದ ಬಿತ್ತನೆ ಬೀಜ ಖರೀದಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಕಳೆದ ಮುಂಗಾರು ಮಳೆ ರೌದ್ರಾವತಾರ ತೋರಿ ಇದ್ದ ಅತ್ಯಲ್ಪ ಬೆಳೆಯನ್ನೂ ನುಂಗಿ ಹಾಕಿ ಕೃಷಿಕನ ಬದುಕನ್ನು ಕಸಿದುಕೊಂಡಿತ್ತು. ಈ ಸಲವಾದರೂ ಉತ್ತಮವಾದ ಹದಭರಿತ ಮಳೆ ಸುರಿದರೆ ಉತ್ತಮ ಇಳುವರಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರ ಕನಸಿಗೆ ಕೊಳ್ಳೆ ಇಡುವ ಲಕ್ಷಣಗಳು ಗೋಚರಿಸುತ್ತಿವೆ.
ಮುಂಗಾರು ಸಕಾಲದಲ್ಲಿ ಆರಂಭವಾಗುತ್ತದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಆದರೆ ಮುಂಗಾರು ಆರಂಭಕ್ಕೂ ಮೊದಲೇ ಭೂಮಿ ಹದಗೊಳಿಸಲು ಮಳೆಯ ಅವಶ್ಯಕತೆ ಇದೆ ಆದರೆ ಮಳೆ ಕೈಕೊಟ್ಟಿದ್ದರಿಂದ ಚಿಂತೆಗೀಡು ಮಾಡಿದೆ ಎನ್ನುತ್ತಿದ್ದಾರೆ ಭಾಗದ ರೈತರು.
ಬೀಜ ಮಾರಾಟ: ಅಳ್ನಾವರ ರೈತ ಸಂಪರ್ಕ ಕೇಂದ್ರದ ಮೂಲಕ ಈಗಾಗಲೇ 200 ಕ್ವಿಂಟಲ್ ಗೋವಿನ ಜೋಳ, 30 ಕ್ವಿಂಟಲ್ ಭತ್ತ ಸಹಾಯ ಧನದಲ್ಲಿ ಮಾರಾಟವಾಗಿದೆ.
ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜದ ಸಂಗ್ರಹವಿದೆ. ಮಳೆಯ ಕೊರತೆಯ ಕಾರಣದಿಂದ ನಿಧಾನ ಗತಿಯಲ್ಲಿ ಸಾಗಿದ್ದ ಬೀಜ ಖರೀದಿ ಇದೀಗ ಚುರುಕುಗೊಂಡಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೀಜ ವಿತರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
–ಸುನಂದಾ ಸಿಂಥೊಳಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಅಳ್ನಾವರ.
–ಎಸ್.ಗೀತಾ