ವರದಿ : ಮಲ್ಲಪ್ಪ ಮಾಟರಂಗಿ
ಯಲಬುರ್ಗಾ: ಉಳಿಮೆಗೆ ಎತ್ತುಗಳು ಇಲ್ಲದೇ, ಟ್ರ್ಯಾಕ್ಟರ್ ಕೂಡ ಸಿಗದ ಪರಿಣಾಮ ಕೆಎಸ್‌ಆರ್‌ಟಿ ನೌಕರನೊಬ್ಬ ಬಿತ್ತನೆ ಎಳೆಸಡ್ಡಿಗೆ(ನೊಗಕ್ಕೆ) ಹೆಗಲು ಕೊಟ್ಟು ಬಿತ್ತನೆ ಮಾಡಿರುವ ಘಟನೆ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮುಧೋಳ ಗ್ರಾಮದ ತ್ರಿಲಿಂಗಯ್ಯ ಬೀಳಗಿಮಠ ಎಂಬ ಸಾರಿಗೆ ನೌಕರ ಹಾವೇರಿ ಜಿಲ್ಲೆ ಹಾನಗಲ್ ಡಿಪೋದಲ್ಲಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಲಾಕ್ ಡೌನ್ ನಿಮಿತ್ತ ರಜೆ ಇದ್ದ ಕಾರಣ ಊರಲ್ಲಿದ್ದಾರೆ. ಹೀಗಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿದರಾಯ್ತು ಎಂದುಕೊಂಡು ತಮ್ಮ ಮೂರು ಎಕರೆ ಹೊಲದಲ್ಲಿ ತಾಯಿಯೊಂದಿಗೆ ಸೇರಿಕೊಂಡು ಸ್ವತಃ ತಾವೇ ಹೆಗಲು ಕೊಟ್ಟು ಹೆಸರು ಬಿತ್ತನೆ ಮಾಡಿದ್ದಾರೆ.
ಬೆಳಗ್ಗೆ 8ಕ್ಕೆ ಆರಂಭವಾದ ಬಿತ್ತನೆ ಸಂಜೆ 5ಕ್ಕೆ ಮುಕ್ತಾಯಗೊಳಿಸಿದ್ದಾರೆ. ಗಜೇಂದ್ರಗಡ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡು ಇವರ ಜಮೀನು ಇದ್ದು, ಇವರ ಕಾರ್ಯ ನೋಡಿ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ವೈರಲ್ ಆಗಿದೆ. ತಾಲೂಕಿನಲ್ಲಿರುವ ಸಣ್ಣ ರೈತರ ಪೈಕಿ ಬಹುತೇಕ ರೈತರ ಪರಿಸ್ಥಿತಿ ಇದೆಯಾಗಿದೆ.
ಸಮಯಕ್ಕೆ ಸರಿಯಾಗಿ ಮಳೆ ಬಾರದೇ, ಬಂದರೂ ಬೆಳೆಗೆ ಸರಿಯಾದ ಬೆಲೆ ಸಿಗದೆ ಪ್ರತಿವರ್ಷ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಬಾರಿ ಕೊರೊನಾ ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ. ಸಣ್ಣ ರೈತರಿಗೆ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಅಂದಪ್ಪ ಕೋಳೂರು, ರೈತ ಸಂಘದ ಜಿಲ್ಲಾ ಅಧ್ಯಕ್ಷ್ಯ
ಏನು ಮಾಡೋದು ಸರ್ ಎತ್ತುಗಳು ಸಿಗಲಿಲ್ಲ ಹೀಗಾಗಿ ನಾವೇ ಬಿತ್ತನೆ ಮಾಡಿದ್ದೇವೆ. ತೇವಾಂಶ ಆರಿ ಹೋಗುತ್ತದೆ. ಅದಕ್ಕೆ ಬಿತ್ತನೆ ಮಾಡಿದ್ದೇವೆ. ಸಣ್ಣ ರೈತರ ಕಷ್ಟ ಹೇಳತೀರದಾಗಿದೆ. ತ್ರಿಲಿಂಗಯ್ಯ ಬೀಳಗಿಮಠ, ಸಾರಿಗೆ ನೌಕರ.