ಮುನೇಶ ತಳವಾರ
ಮುಂಡಗೋಡ: ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಬಿತ್ತನೆಗೆ ಭೂಮಿ ಉತ್ತಮ ಹದವಾಗಿದ್ದು ಕೊರೊನಾ ಭಯದ ನಡುವೆಯೂ ನೇಗಿಲಯೋಗಿಯ ಕಾಯಕ ಚುರುಕುಗೊಂಡಿದೆ.
ತಾಲೂಕಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿ ಈಗಾಗಲೇ ಪಟ್ಟಣ ಸೇರಿ 5 ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಜಿಲ್ಲಾಡಳಿತ ಘೋಷಿಸಿದ್ದರೂ ಕೃಷಿ ಚಟುವಟಿಕೆ ತೊಂದರೆ ಆಗದಂತೆ ರೈತರಿಗೆ ಉಳುಮೆ ಮಾಡಲು ಸಮಯವನ್ನು ನಿಗದಿ ಮಾಡಿದೆ. ವಾಸ್ತವವಾಗಿ ಗ್ರಾಮೀಣ ಭಾಗದಲ್ಲಿಯೇ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದರೂ ಇದನ್ನು ಲೆಕ್ಕಸದೇ ಅನ್ನದಾತ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.
ಕೃಷಿ ಇಲಾಖೆಯ ವತಿಯಿಂದ ತಾಲೂಕಿನಲ್ಲಿ ಮುಂಗಾರು ಹಂಗಾಮಿಗಾಗಿ ಪ್ರಮುಖ ಬೆಳೆಯಾದ ಭತ್ತ ಹಾಗೂ ಗೋವಿನ ಜೋಳ ಬೀಜವನ್ನು ಸಹಾಯಧನದಲ್ಲಿ ಮುಂಡಗೋಡ ಹಾಗೂ ಪಾಳಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ವಿತರಿಸುತ್ತಿದ್ದಾರೆ. ಕಳೆದ ವರ್ಷ ಕೈಕೊಟ್ಟಿದ್ದ ಜೋಳ: ಕಾತೂರು ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮದ ರೈತರು ಲೋಕಲ್ ಭತ್ತದ ತಳಿಯ ಒಣ ಬಿತ್ತನೆ ಮಾಡಿದರೆ, ಇನ್ನು ಕೆಲವು ರೈತರು ಮಳೆಯ ಹದ ಕಾಯ್ದು ಈಗ ತಾನೇ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದ ಮಾಡುತ್ತಿದ್ದಾರೆ. ಕೆಲವರು ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡಿದರೆ ಇನ್ನು ಕೆಲ ರೈತರು ಎತ್ತುಗಳನ್ನು ಸಂಗಾತಿಯಾಗಿ ಬಳಸಿ ಭೂಮಿ ಹದವನ್ನು ಮುಗಿಸಿದ್ದಾರೆ.
ಕಳೆದ ಬಾರಿ ಗೋವಿನ ಜೋಳದ ಬೆಳೆಯು ಇಳುವರಿ ಹೆಚ್ಚಿದ್ದರೂ ಸರಿಯಾದ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಮಳೆಯ ಭರವಸೆಯ ಮೇಲೆ ಭೂಮಿ ಹದವನ್ನು ಮಾಡಿದ್ದೇವೆ ಕಾದು ನೋಡಬೇಕು ಎಂಬ ಮಾತು ತಾಲೂಕಿನ ರೈತರಿಂದ ಕೇಳಿ ಬರುತ್ತಿದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿ 6500 ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬಿತ್ತನೆ, 5000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳದ ಬೆಳೆ, 50 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. 500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಕಾರ್ಯ ಈಗಾಗಲೇ ಮಾಡಿದ್ದಾರೆ.