ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಅಗ್ನಿಪಥ್ ಯೋಜನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದು, ಯುವ ಜನತೆ ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ನಿರ್ಧಾರದ ಮೇಲೆ ವಿಶ್ವಾಸ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪಂಚಮಸಾಲಿ ಹೋರಾಟಕ್ಕೆ ಭಯಬಿದ್ರಾ ಸಿಎಂ ಬೊಮ್ಮಾಯಿ? ಸಚಿವರ ಮೂಲಕ ಸಂಧಾನಕ್ಕೆ ಯತ್ನ
ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಅಜಿತ್ ದೋವಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಯುವಕರು ಮುಂದೆ ಅಗ್ನಿವೀರರಾಗಬೇಂದು ಬಯಸಬೇಕು, ಇದು ಪಾಸಿಟಿವ್ ವಿಚಾರ. ಈ ಮೂಲಕ ದೇಶದ ಮೇಲೆ ನಂಬಿಕೆ ಇಡಬೇಕು. ಅದೇ ರೀತಿ ಪ್ರಧಾನಿ ಮೋದಿ ನಾಯಕತ್ವದ ಮೇಲೆ ಮತ್ತು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಎಂದು ದೋವಲ್ ಕಿವಿ ಮಾತು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ಜೊತೆ ಮಾತನಾಡಿದ ಅವರು, ಭವಿಷ್ಯದಲ್ಲಿ ನಾವು ಅದೃಶ್ಯ ಶತ್ರುಗಳ ವಿರುದ್ಧ ಸಂಪರ್ಕ ರಹಿತ ಯುದ್ಧ ಮಾಡಬೇಕಾದ ಸನ್ನಿವೇಶದಲ್ಲಿದ್ದೇವೆ. ಈ ನಿಟ್ಟಿನಲ್ಲಿ ದೇಶಕ್ಕೆ ಯುವಕರ ಮತ್ತು ಚಾಣಕ್ಯ ಸೇನೆಯ ಅಗತ್ಯವಿದೆ ಎಂದು ಹೇಳಿದರು.