ಚಂಡೀಗಢ: ಮೊಹಾಲಿಯಲ್ಲಿ ಆರಂಭವಾಗಿರುವ 13ರ ವಯೋಮಿತಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟ ದಿಢೀರ್ ನಿಂತು ಹೋಗಿದ್ದು ದಿನದ ಮಟ್ಟಿಗೆ ಮುಂದೆ ಹೋಗಿದೆ. 60ಕ್ಕೂ ಅಧಿಕ ಪೋಷಕರು ಪ್ರತಿಭಟನೆ ನಡೆಸಿದ್ದೇ ಇದಕ್ಕೆ ಕಾರಣ. ಇಂತಹದ್ದೊಂದು ಘಟನೆ ಇದೇ ಮೊದಲು ಎಂದು ವರದಿಯಾಗಿದೆ.
ಪಂಜಾಬ್ ಬ್ಯಾಡ್ಮಿಂಟನ್ ಸಂಸ್ಥೆ ಮೊಹಾಲಿಯಲ್ಲಿ ಈ ಕೂಟವನ್ನು ಹಮ್ಮಿಕೊಂಡಿದೆ. ಇದರಲ್ಲಿ ವಯೋಮಿತಿ ದಾಟಿದವರನ್ನೂ ಆಡಿಸಲಾಗಿದೆ ಎನ್ನುವುದು ಪೋಷಕರ ದೂರು.
ಪೋಷಕರು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ಮಿಶ್ರಾ ಅವರಿಗೆ ಕೂಟದ ಆರಂಭದಲ್ಲೇ ದಾಖಲೆ ನೀಡಿದ್ದರು.
ರಾಜಸ್ಥಾನದ ಇಬ್ಬರು ನಕಲಿ ಜನನ ಪ್ರಮಾಣಪತ್ರ ಹೊಂದಿರುವುದನ್ನು ಸಾಬೀತು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಿಶ್ರಾ ಅಂತಹವರನ್ನು ಆಡಲು ಬಿಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಕೂಟ ಆರಂಭವಾದಾಗ ಇಬ್ಬರೂ ಆಡಲು ಸಿದ್ಧವಾಗಿದ್ದರು. ಇದನ್ನು ನೋಡಿ ಸಿಟ್ಟಾದ 60ಕ್ಕೂ ಅಧಿಕ ಪೋಷಕರು ಗಲಾಟೆಯೆಬ್ಬಿಸಿದ್ದಾರೆ.
ಇಬ್ಬರು ಕ್ರೀಡಾಪಟುಗಳು ವಯೋಮಿತಿ ದಾಟಿದ್ದರೂ, ಅದನ್ನು ಮುಚ್ಚಿಟ್ಟಿದ್ದಾರೆ. ಅದಕ್ಕೆ ನಕಲಿ ಪ್ರಮಾಣಪತ್ರ ನೀಡಿದ್ದಾರೆ. ಇದನ್ನು ಆರ್‌ಟಿಐಗೆ ಅರ್ಜಿ ಸಲ್ಲಿಸುವ ಮೂಲಕ ಪೋಷಕರು ಕಂಡುಕೊಂಡಿದ್ದಾರೆ. ಇಷ್ಟಾದರೂ ಇಬ್ಬರು ಆಡಲು ಸಜ್ಜಾಗಿದ್ದರಿಂದ ಪೋಷಕರು ಸಿಟ್ಟಾಗಿದ್ದಾರೆ. ಕೆಲವರು ಅಂಕಣದ ಮೇಲೆಯೇ ಕುಳಿತು ಧರಣಿ ನಡೆಸಿದ್ದಾರೆ.