ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೆ.ಜಿ.ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‌ನಲ್ಲಿ ಹುಲಿ ಹಾವಳಿ ಮುಂದುವರಿದಿದ್ದು, ಶುಕ್ರವಾರ ಒಂದು ಕುರಿಯನ್ನು ಕೊಂದು ಹಾಕಿದ್ದರೆ, ಮೂರು ಕುರಿಗಳು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.
ಉದ್ಯಾನವನದಂಚಿನಲ್ಲಿರುವ ಎಸ್ಟೇಟ್‌ನಲ್ಲಿ ಗೋಟ್‌ಫಾರಂ ಇದ್ದು, ಕುರಿಗಳನ್ನು ಎಸ್ಟೇಟ್‌ನೊಳಗಿರುವ ಮುತ್ತಣ್ಣ ಬ್ಲಾಕ್ 22ರಲ್ಲಿ ಮೇಯಲು ಬಿಟ್ಟಿದ್ದ ವೇಳೆ, ಕುರಿಗಳ ಮೇಲೆ ದಾಳಿ ನಡೆಸಿರುವ ಹುಲಿಯು ಒಂದು ಕುರಿಯನ್ನು ಕೊಂದು ಹಾಕಿದ್ದು, ಶವ ಪತ್ತೆಯಾಗಿದೆ. ಮೇಯಲು ಬಿಟ್ಟಿದ್ದ ಮಂದೆಯಲ್ಲಿ ಮೂರು ಕುರಿಗಳನ್ನು ಹೊತ್ತೂಯ್ದಿದೆ.
ಕುರಿ ಮಂದೆಯೊಂದಿಗೆ ತೆರಳಿದ್ದ ಮಣಿಯಮ್ಮ ಹಾಗೂ ರಮೇಶ್ ತಮ್ಮ ಕಣ್ಮುಂದೆಯೇ ಹುಲಿ ಕುರಿ ಮಂದೆ ಮೇಲೆ ದಾಳಿ ನಡೆಸಿದ್ದು, ನಾವುಗಳು ಹೆದರಿ ಸ್ಥಳದಿಂದ ಪ್ರಾಣ ಉಳಿಸಿಕೊಂಡು ಹಿಂತಿರುಗಿದ್ದೇವೆಂದು ಮಾಲಿಕರಿಗೆ ತಿಳಿಸಿದ ಮೇರೆಗೆ, ಫಾರಂ ಮಾಲಿಕರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಡಿಆರ್‌ಎಫ್‌ಓ ವೀರಭದ್ರಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಹುಲಿಯ ಮಲ ಪತ್ತೆಯಾಗಿದೆ.
ಮರಿ ಸೆರೆ ಬಳಿಕ ತಾಯಿ ಹುಲಿ ಪ್ರತ್ಯಕ್ಷ: ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಇದೇ ಎಸ್ಟೇಟ್‌ನಲ್ಲಿ ಆಗಾಗ್ಗೆ ಮೂರು ಮರಿಗಳೊಂದಿಗೆ ಹುಲಿ ಕಾಣಿಸಿಕೊಂಡು ಹತ್ತಾರು ಜಾನುವಾರು, ಕುರಿಗಳನ್ನು ಕೊಂದು ಹಾಕಿತ್ತು. ಒಂದು ಕಾಡುಹಂದಿಯನ್ನು ಕೊಂದು ತಿಂದು ಹಾಕಿತ್ತು.
ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರೂ ಫಲಪ್ರಧವಾಗಿರಲಿಲ್ಲ, ಆದರೆ, ವಾರದ ಹಿಂದೆ ಎಸ್ಟೇಟ್ ಪಕ್ಕದ ಶೆಟ್ಟಹಳ್ಳಿ ಲಕ್ಕಪಟ್ಟಣದಲ್ಲಿ ಉರುಳಿಗೆ ಸಿಲುಕಿ, ನಿತ್ರಾನಗೊಂಡಿದ್ದ ಎರಡೂವರೆ ವರ್ಷದ ಹುಲಿಯನ್ನು ರಕ್ಷಿಸಲಾಗಿತ್ತು. ಇತ್ತ ಗ್ರಾಮಸ್ಥರು ಆತಂಕದಲ್ಲಿದ್ದು, ಹುಲಿಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.
ಕೂಂಬಿಂಗ್ ಮುಂದುವರಿಕೆ: ಈ ಎಸ್ಟೇಟ್ ಉದ್ಯಾನದಂಚಿನಲ್ಲಿದ್ದು, ವಾರದ ಹಿಂದೆ ಸೆರೆಯಾದ ಹುಲಿ ಮರಿಯನ್ನು ಹುಡುಕಿಕೊಂಡು ತಾಯಿ ಹುಲಿ ಬಂದಿರಬಹುದು. ಹುಲಿಯನ್ನು ಪತ್ತೆ ಹಚ್ಚಲು ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ನಡೆಸಲಾಗುವುದೆಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದ್ದಾರೆ.