Advertisement

ಮತ್ತೆ ನಾಟಿಕೋಳಿ ವಿವಾದ

10:42 AM Aug 05, 2017 | Team Udayavani |

ಮತ್ತೂಮ್ಮೆ “ನಾಟಿಕೋಳಿ’ ವಿವಾದಕ್ಕೆ ಕಾರಣವಾಗಿದೆ. ಹೌದು, ಅಷ್ಟಕ್ಕೂ ಈ ವಿವಾದವಾಗೋಕೆ ಕಾರಣ, “ನಾಟಿಕೋಳಿ’ ಚಿತ್ರದ ಜಾಹಿರಾತು. ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ಎದುರಾಗೋದು ಸಹಜ. ವಿಶೇಷ ಇರೋದೇ ಇಲ್ಲಿ. ವೆಂಕಟ್‌ ಮೂವೀಸ್‌ ಹೆಸರಲ್ಲಿ “ನಾಟಿಕೋಳಿ’ ಜಾಹೀರಾತು ಪ್ರಕಟವಾಗಿದ್ದು, ಅದರಲ್ಲಿ ವೆಂಕಟ್‌ ನಿರ್ಮಾಪಕರು, ಕೆ.ಟಿ.ನಾಯಕ್‌ ನಿರ್ದೇಶಕರು ಎಂದು ಪ್ರಕಟವಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ ಎಂದರೆ ತಪ್ಪಿಲ್ಲ.

Advertisement

ಜಾಹೀರಾತಿನಲ್ಲಿ ವೆಂಕಟ್‌ ಮತ್ತು ನಾಯಕ್‌ ಅವರ ಹೆಸರಿದ್ದರೆ ಏನು ತಪ್ಪು, ಅದರಲ್ಲಿ ವಿವಾದ ಮಾಡುವಂತದ್ದೇನಿದೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಫ್ಲಾಶ್‌ಬ್ಯಾಕ್‌ಗೆ ಹೋಗಬೇಕು. ಎರಡು ವರ್ಷಗಳ ಹಿಂದೆ, ಶ್ರೀನಿವಾಸರಾಜು ನಿರ್ದೇಶನದಲ್ಲಿ “ನಾಟಿಕೋಳಿ’ ಚಿತ್ರ ಅನೌನ್ಸ್‌ ಆಗಿತ್ತು. ಆಗ ಚಿತ್ರಕ್ಕೆ ರಾಗಿಣಿ ನಾಯಕಿ ಅಂತಾಗಿ, ಅವರ ಫೋಟೋ ಶೂಟ್‌ ನಡೆಸಿದ್ದೂ ಆಗಿತ್ತು.

ರಾಗಿಣಿ ಅವರ ಫೋಟೋಶೂಟ್‌ ನಡೆಸುವ ವೇಳೆ, ಅವರ ಬಾಯ್‌ಫ್ರೆಂಡ್‌ ಮತ್ತು ನಿರ್ಮಾಪಕ ವೆಂಕಟ್‌ ನಡುವೆ ಕಾರಣಾಂತರಗಳಿಂದ ದೊಡ್ಡ ಜಗಳವಾಗಿತ್ತು. ಅದರಿಂದಾಗಿ, ರಾಗಿಣಿ ಚಿತ್ರತಂಡದಿಂದ ಹೊರಬಂದಿದ್ದಷ್ಟೇ ಅಲ್ಲ, ಆ ಚಿತ್ರವೇ ನಿಂತು ಹೋಯ್ತು. ಈ ಮಧ್ಯೆ ಪ್ರಿಯಾಮಣಿ ಅಭಿನಯದಲ್ಲಿ “ನಾಟಿಕೋಳಿ’ ಚಿತ್ರ ಮುಂದುವರೆಸಲಾಗುತ್ತದೆ ಎಂಬ ಸುದ್ದಿ ಏನೋ ಇತ್ತು. ಆದರೆ, ಶ್ರೀನಿವಾಸರಾಜು ಮತ್ತು ವೆಂಕಟ್‌, ಆ ಚಿತ್ರವನ್ನು ಬಿಟ್ಟು, “ದಂಡುಪಾಳ್ಯ’ ಚಿತ್ರದ ಮುಂದುವರೆದ ಭಾಗ “2′ ಚಿತ್ರ ಶುರುಮಾಡಿ, ರಿಲೀಸ್‌ ಕೂಡ ಮಾಡಿದರು.

ಹೀಗಿರುವಾಗಲೇ, “ನಾಟಿಕೋಳಿ’ ಚಿತ್ರದ ಜಾಹೀರಾತು ಬಂದಿದೆ. ಆದರೆ, ಅದರಲ್ಲಿ ಶ್ರೀನಿವಾಸರಾಜು ಹೆಸರಿಲ್ಲ. ಅವರ ಬದಲು ಕೆ.ಟಿ. ನಾಯಕ್‌ ಅವರ ಹೆಸರು ಇದೆ. ಹಾಗಾದರೆ, “ನಾಟಿಕೋಳಿ’ ಚಿತ್ರದಿಂದ ಶ್ರೀನಿವಾಸರಾಜು ಹೊರಬಂದರೆ? ಅಥವಾ ಬರೀ “ನಾಟಿಕೋಳಿ’ ಎಂಬ ಹೆಸರಿಟ್ಟುಕೊಂಡು, ಇನ್ನೊಂದು ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಬರುವುದು ಸಹಜ. ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶ್ರೀನಿವಾಸರಾಜು ಅವರನ್ನು “ಉದಯವಾಣಿ’ ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು.

“ನನಗೆ “ನಾಟಿಕೋಳಿ’ ಚಿತ್ರದ ಜಾಹಿರಾತು ಬಂದಿರೋದು ಗೊತ್ತಿಲ್ಲ. ಬೇರೆ ನಿರ್ದೇಶಕರ ಹೆಸರಿರುವುದೂ ಗೊತ್ತಿಲ್ಲ. ಆದರೆ, ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಅದಕ್ಕಾಗಿ ಆರು ತಿಂಗಳ ಕಾಲ ಕೆಲಸ ಮಾಡಿದ್ದೇನೆ. ಸಿನಿಮಾಗಾಗಿ ಹಾಡುಗಳನ್ನೂ ರೆಡಿ ಮಾಡಿದ್ದುಂಟು. ಆದರೆ, ಈಗ ಬೇರೆ ಯಾರೋ ಬಂದು ಸಿನಿಮಾ ಮಾಡ್ತೀನಿ ಅಂದರೆ ಹೇಗೆ? ಸ್ಕ್ರಿಪ್ಟ್ ಮತ್ತು ಟೈಟಲ್‌ ನನ್ನದು. ಆ ಬಗ್ಗೆ ಅಗ್ರಿಮೆಂಟ್‌ ಕೂಡ ಆಗಿದೆ. “ನಾಟಿಕೋಳಿ’ ಚಿತ್ರವನ್ನು ನಾನೇ ಮಾಡ್ತೀನಿ. ಆದರೆ, ಯಾವಾಗ ಅನ್ನೋದು ನನಗೇ ಸ್ಪಷ್ಟತೆ ಇಲ್ಲ’ ಎನ್ನುತ್ತಾರೆ ಶ್ರೀನಿವಾಸರಾಜು.

Advertisement

ಬರೀ ಕಥೆ ಮತ್ತು ಚಿತ್ರಕಥೆಯಷ್ಟೇ ಅಲ್ಲ, ಶೀರ್ಷಿಕೆ ಸಹ ತಮ ಹೆಸರಲ್ಲಿದೆ ಎನ್ನುವ ಅವರು, “ನಿರ್ಮಾಪಕರು ಬೇರೆ ನಿರ್ದೇಶಕರ ಜತೆ ಬೇರೆ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಿ ಅದು ಸಮಸ್ಯೆ ಇಲ್ಲ. ಆದರೆ, “ನಾಟಿಕೋಳಿ’ ಹೆಸರಲ್ಲಿ ಮಾಡುವುದು ಸರಿಯಲ್ಲ. ಯಾಕೆಂದರೆ, ಅದು ನಾನು ಇಟ್ಟಂತಹ ಟೈಟಲ್‌. ಅವರ ಬ್ಯಾನರ್‌ನಲ್ಲಿ ಸಿನಿಮಾ ಶುರುವಾದಾಗ, ಕಥೆ, ಚಿತ್ರಕಥೆ ಹಾಗೂ ಟೈಟಲ್‌ ನನ್ನದು ಅಂತಾನೇ ಅಗ್ರಿಮೆಂಟ್‌ ಆಗಿದೆ. ಹಾಗಾಗಿ, ಆ ಹೆಸರು ಇಟ್ಟು ಸಿನಿಮಾ ಮಾಡಲು ನಾನು ಬಿಡಲ್ಲ. ಒಂದು ವೇಳೆ ಅವರು “ನಾಟಿಕೋಳಿ’ ಹೆಸರಲ್ಲಿ ಸಿನಿಮಾ ಮಾಡೋಕೆ ಮುಂದಾದರೆ, ನಾನು ಫಿಲ್ಮ್ ಚೇಂಬರ್‌ಗೂ ಹೋಗುತ್ತೇನೆ.

ಸದ್ಯಕ್ಕೆ “ನಾಟಿಕೋಳಿ’ ಹೆಸರಿನ ಸಿನಿಮಾ ಮಾಡುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗೇನಾದರೂ ಆದಲ್ಲಿ, ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇನೆ. ಈಗ ಕಂಚಿಶ್ರೀ ಅವರ ಕುರಿತು “ಆಚಾರ್ಯ ಅರೆಸ್ಟ್‌’ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿದ್ದೇನೆ. ಈ ಚಿತ್ರದ ನಂತರ ನಾನು “ನಾಟಿಕೋಳಿ’ ಮಾಡ್ತೀನಿ ಎಂದು ಹೇಳುತ್ತಾರೆ ಶ್ರೀನಿವಾಸರಾಜು. ಈ ಕುರಿತು ನಿರ್ಮಾಪಕ ವೆಂಕಟ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಅವರು ಫೋನ್‌ ಸ್ವಿಚ್‌ ಆಫ್ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next