ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಹಾಸಭೆಯ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ನಡೆಸಿದ ನಂತರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸದಸ್ಯತ್ವ ಅಭಿಯಾನವನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗಾಗಿ ಮತ್ತೆ ಹೋರಾಟ ಆರಂಭಿಸುತ್ತಿಲ್ಲ. ಇನ್ನು ಮುಂದೆ ಬೃಹತ್ ಸಮಾವೇಶಗಳನ್ನು ಮಾಡುವ ಬದಲು ಸಂಘಟನೆ ಮಾಡುತ್ತೇವೆ. ಕೇಂದ್ರ ಸರ್ಕಾರವು ಸರ್ಕಾರ ರಾಜ್ಯ ಸರ್ಕಾರ ಕಳುಹಿಸಿಕೊಟ್ಟ ಪ್ರತ್ಯೇಕ ಧರ್ಮದ ಮಾನ್ಯತೆಯ ಪ್ರಸ್ತಾಪ ತಿರಸ್ಕರಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಗತ್ಯ ಬಿದ್ದರೆ ಕೇಂದ್ರ ಸರ್ಕಾರವನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಹೀಗಾಗಿ ಮಹಾಸಭೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೆಲವು ನಾಯಕರ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾವು ಹಿಂದೂ ಧರ್ಮ ಒಡೆದಿದ್ದೇವೆ ಎಂದು ಸುಳ್ಳು ಆರೋಪ ಮಾಡಿ ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಆದರೆ, ಲಿಂಗಾಯತ ಧರ್ಮ 900 ವರ್ಷಗಳಿಂದಲೂ ಸ್ವತಂತ್ರವಾಗಿದ್ದು, ಹಿಂದೂ ಧರ್ಮದ ಭಾಗವೇ ಆಗಿರಲಿಲ್ಲ. ಹೀಗಾಗಿ ಧರ್ಮ ಒಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಬಸವ ತ್ವತ್ವಗಳನ್ನು ಒಪ್ಪಿಕೊಂಡು ಕೆಲವು ವೈದಿಕ ಬ್ರಾಹ್ಮಣರು ಲಿಂಗಾಯತ ಧರ್ಮ ಸೇರಿದ್ದರು. ಅವರು ಕ್ರಮೇಣ ವೈದಿಕ ಆಚರಣೆಗಳನ್ನು ಮುಂದುವರಿಸಿದ್ದರಿಂದ ಲಿಂಗಾಯತ ಧರ್ಮದಲ್ಲಿ ವೈದಿಕ ಆಚರಣೆ ಆರಂಭವಾಯಿತು. ವೀರಶೈವರೂ ಲಿಂಗಾಯತ ಧರ್ಮದ ಭಾಗವಾಗಿರುವುದರಿಂದ ಅವರನ್ನು ಧರ್ಮದಿಂದ ಹೊರಗಿಡುವ ಪ್ರಶ್ನೆಯೇ ಬರುವುದಿಲ್ಲ. ಆದರೂ ಕೆಲವು ಪಂಚಪೀಠಾಧೀಶರು ಅಪಪ್ರಚಾರ ಮಾಡುವ ಪ್ರಯತ್ನ ನಡೆಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಬಿ.ಪಾಟೀಲ್, ಡಾ.ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.