ಹೊಸದಿಲ್ಲಿ: ಭೂತಾನ್ ವ್ಯಾಪ್ತಿಯೊಳಗಿನ ಡೋಕ್ಲಾಂನಲ್ಲಿ ಭಾರತ ಮತ್ತು ಚೀನ ಸೈನಿಕರು ಪರಸ್ಪರ ಮುಖಾಮುಖೀಯಾಗಿ ಒಂದೂವರೆ ವರ್ಷ ಕಳೆದ ಅನಂತರ, ಚೀನಾ ಸೈನ್ಯವು ಡೋಕ್ಲಾಂ ಸಮೀಪದ ಮತ್ತೂಂದು ಭೂತಾನ್ ಪ್ರದೇಶವನ್ನು ಅತಿಕ್ರಮಿಸಿರುವುದು ಬೆಳಕಿಗೆ ಬಂದಿದೆ. ಚೀನದ ಸೇನೆಯು ಭೂತಾನ್‌ನ ಚರಿತಾಂಗ್ ಕಣಿವೆ ಪ್ರದೇಶವನ್ನು ಕಳೆದ ವರ್ಷವೇ ಅತಿಕ್ರಮಿಸಿಕೊಂಡಿದ್ದು, ಇದು ಈಗ ತಿಳಿದುಬಂದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಈ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ 73 ದಿನಗಳ ಕಾಲ ಡೋಕ್ಲಾಂ ಅನ್ನು ಅತಿಕ್ರಮಿಸಿಕೊಂಡಿದ್ದ ಮಾದರಿಯಲ್ಲೇ ಚರಿತಂಗ್ ಕಣಿವೆಯನ್ನೂ ಅತಿಕ್ರಮಿಸಿಕೊಳ್ಳಲಾಗಿದೆ. ವಿಚಿತ್ರವೆಂದರೆ, ಈ ಗುಪ್ತ ಅತಿಕ್ರಮಣವು, ಚೀನ ಮತ್ತು ಭೂತಾನ್ ದೇಶಗಳು ಕಳೆದ ವರ್ಷ ತಮ್ಮ ನಡುವಿನ ಗಡಿ ವಿವಾದವನ್ನು ಇತ್ಯರ್ಥಗೊಳಿಸಲು ನಡೆಸಿದ ಸಭೆಯ ವೇಳೆಯಲ್ಲೇ ನಡೆದಿದೆ ಎಂದು ಮೂಲಗಳು ತಿಳಿಸಿವೆ.